ಬೆಂಗಳೂರು: ನಾಳೆಯಿಂದ ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಸುದ್ದಿಗೋಷ್ಠಿ ನಡೆಸಿದ್ದಾರೆ.
ನಾಳೆಯಿಂದ ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆ ಆರಂಭವಾಗಲಿದೆ. ಅನೇಕ ರಾಜ್ಯಗಳಲ್ಲಿ ಎಸ್ಐಆರ್ ಆಗಿದ್ದನ್ನು ನೀವು ನೋಡಿದ್ದೀರಿ. ಅಧಿಕಾರಿಗಳು ಮನೆಮನೆಗೆ ಭೇಟಿ ನೀಡಿ ಮಾಹಿತಿ ಪಡೆಯುತ್ತಾರೆ. ಎಲ್ಲಾ ಮತದಾರರು ನಿಮ್ಮ ಮತದ ಹಕ್ಕನ್ನು ಉಳಿಸಿಕೊಳ್ಳಿ, ನಿಮ್ಮ ಬದುಕಿನ ಹಕ್ಕನ್ನು ಉಳಿಸಿಕೊಳ್ಳಿ ಎಂದು ಸಿಎಂ ಹೇಳಿದ್ದಾರೆ.
ನಿಮ್ಮ ಮತ ಹಕ್ಕು ಉಳಿಸಿಕೊಳ್ಳದಿದ್ದರೆ ಸೌಲಭ್ಯದಿಂದ ವಂಚಿತರಾಗುತ್ತಿರಿ. ಮತದಾನದ ಹಕ್ಕು ಕಳೆದುಕೊಂಡರೆ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತೀರಿ. ಪ್ರತಿದಿನ ಬಿಎಲ್ಒ ಗಳು 30 ರಿಂದ 50 ಮನೆಗಳಿಗೆ ಭೇಟಿ ನೀಡಲಿದ್ದಾರೆ. ಎಲ್ಲರೂ ನಿಮ್ಮ ಮತವನ್ನು ಉಳಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ನಾಳೆಯಿಂದ ಪ್ರತಿ ಮನೆಗೆ ಫಾರಂ ತಂದು ಕೊಡುತ್ತಾರೆ. ಮನೆಯಲ್ಲಿಲ್ಲದಿದ್ದರೆ ವಾರಸುದಾರರು ಸಹಿ ಹಾಕಿ ಕೊಡಬೇಕು. ಫಾರಂನಲ್ಲಿ ಬಿಎಲ್ಒಗಳಿಗೆ ಸಹಿ ಹಾಕಿ ಕೊಡಬೇಕು. ನಮ್ಮ ಚುನಾವಣಾ ಆಯೋಗದ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತಾರೆ. ಅರ್ಜಿ ತುಂಬಿಕೊಡದಿದ್ದರೆ ಮತದಾನದ ಹಕ್ಕು ಕಳೆದುಕೊಳ್ಳುತ್ತೀರಿ. ಕಡ್ಡಾಯವಾಗಿ ಅರ್ಜಿಯನ್ನು ತುಂಬಿ ಕೊಡಲೇಬೇಕಾಗುತ್ತದೆ ಎಂದು ಸಿಎಂ ತಿಳಿಸಿದ್ದಾರೆ.