ಬೆಂಗಳೂರು: ಅರಣ್ಯವಾಸಿಗಳ ಹಕ್ಕುಗಳ ರಕ್ಷಣೆ, ಮೂಲಭೂತ ಸೌಲಭ್ಯಗಳಿಗೆ ಆದ್ಯತೆ ನೀಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವಿಧಾನಸೌಧದಲ್ಲಿಂದು ಅರಣ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಇಲಾಖೆಯ ಪ್ರಸ್ತುತ ಕಾರ್ಯವೈಖರಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಅಗತ್ಯ ಸೂಚನೆಗಳನ್ನು ನೀಡಲಾಯಿತು.
ಅರಣ್ಯವಾಸಿಗಳ ಅರಣ್ಯ ಹಕ್ಕುಗಳನ್ನು ಯಾವುದೇ ಕಾರಣಕ್ಕೂ ಕಡೆಗಣಿಸಬಾರದು. ಸಣ್ಣಪುಟ್ಟ ನೆಪಗಳನ್ನು ಮುಂದಿಟ್ಟು ಅವರಿಗೆ ತೊಂದರೆ ನೀಡದೆ, ನಿಯಮಾನುಸಾರ ಕುಡಿಯುವ ನೀರು, ರಸ್ತೆ, ವಿದ್ಯುತ್ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಮೊದಲ ಆದ್ಯತೆ ನೀಡಬೇಕು. ಜೊತೆಗೆ ನಮ್ಮ ಅಮೂಲ್ಯವಾದ ಅರಣ್ಯ ಪ್ರಾಣಿ ಸಂಪತ್ತಿನ ಸಂರಕ್ಷಣೆ ಪರಿಣಾಮಕಾರಿಯಾಗಿ ಆಗಬೇಕು. ಮಾನವ – ವನ್ಯಜೀವಿ ಸಂಘರ್ಷ ತಪ್ಪಿಸಲು ಅಧಿಕಾರಿಗಳು ಹೊಸ ಮಾರ್ಗೋಪಾಯಗಳ ಬಗ್ಗೆ ನಿರಂತರ ಅಧ್ಯಯನ ನಡೆಸಬೇಕು ಎಂದು ಸೂಚನೆ ನೀಡಲಾಗಿದೆ.
ಗಣಿಗಾರಿಕೆ ಹಾಗೂ ಕೈಗಾರಿಕಾ ಯೋಜನೆಗಳಿಗೆ ಸರ್ಕಾರಿ ಜಾಗ ಪಡೆದು ವರ್ಷಗಳ ಕಾಲ ಚಟುವಟಿಕೆ ಆರಂಭಿಸದಿದ್ದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಇಂತಹ ವಿಳಂಬದಿಂದ ಸರ್ಕಾರಕ್ಕೆ ಆದಾಯ ನಷ್ಟವಾಗುವುದಲ್ಲದೆ ಉತ್ಪಾದನಾ ವೆಚ್ಚವೂ ಹೆಚ್ಚಾಗುತ್ತದೆ, ಇದನ್ನು ಸಹಿಸುವುದಿಲ್ಲ. ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಾಗುತ್ತಿದ್ದು, ಸಭೆಯಲ್ಲಿ ಕೆಳಕಂಡ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ:
– ಬಾಕಿ ಇರುವ ಎಲ್ಲಾ ಹಳೆಯ ಅರಣ್ಯ ಅನುಮತಿ ಪ್ರಕರಣಗಳನ್ನು ಜುಲೈ 15ರೊಳಗೆ ತ್ವರಿತವಾಗಿ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಲಾಗುವುದು.
– ಶರಾವತಿ ಪಂಪ್ಡ್ ಸ್ಟೋರೇಜ್, ಗೋವಾ ತಮ್ನೇರ್, ಕಳಸಾ ಬಂಡೂರಿ ಮತ್ತು ಬಿಡಿಎ ಪೆರಿಫೆರಲ್ ರಿಂಗ್ ರಸ್ತೆ ಯೋಜನೆಗಳ ಅರಣ್ಯ ಅನುಮತಿ ಪ್ರಕ್ರಿಯೆಗಳನ್ನು ತ್ವರಿತ ಗತಿಯಲ್ಲಿ ವಿಲೇವಾರಿ ಮಾಡಲು ಸೂಚಿಸಲಾಗಿದೆ.
– ವನ್ಯಜೀವಿಗಳ ಮೇಲೆ ನಿಗಾ ಇಡಲು ‘ಥರ್ಮಲ್ ಡ್ರೋನ್’ ವ್ಯವಸ್ಥೆ ಅಳವಡಿಕೆ ಹಾಗೂ ನೆಡುತೋಪು ನಿರ್ಮಾಣ, ಸಸಿ ವಿತರಣೆ ಕಾರ್ಯಕ್ರಮಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ನಿರ್ದೇಶಿಸಲಾಗಿದೆ.
ಈ ಸಂದರ್ಭದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಆರ್ಥಿಕ ಸಲಹೆಗಾರ ಎಲ್. ಕೆ. ಅತೀಕ್, ಅಪರ ಮುಖ್ಯ ಕಾರ್ಯದರ್ಶಿಗಳಾದ ತುಷಾರ್ ಗಿರಿನಾಥ್, ರಿತೇಶ್ ಕುಮಾರ್ ಸಿಂಗ್, ಅಂಜುಮ್ ಪರ್ವೇಜ್, ಕರ್ನಾಟಕ ಅರಣ್ಯ ಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ ಮತ್ತಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.