ಬೆಂಗಳೂರು: ರಾಜ್ಯಾದ್ಯಂತ ಜುಲೈ 30ರ ಮಂಗಳವಾರದಿಂದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್ಐಆರ್) ಆರಂಭವಾಗಲಿದೆ.
ಜೂನ್ 30 ರಿಂದ ಜುಲೈ 29 ರವರೆಗೆ ಬೂತ್ ಮಟ್ಟದ ಅಧಿಕಾರಿಗಳು ಮನೆಮನೆಗೆ ಭೇಟಿ ನೀಡಲಿದ್ದಾರೆ. ಆಗಸ್ಟ್ 5ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುವುದು. ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಆಗಸ್ಟ್ 5 ರಿಂದ ಸೆ. 4ರ ವರೆಗೆ ಅವಕಾಶ ನೀಡಲಾಗಿದೆ. ಅಕ್ಟೋಬರ್ 3ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳ ಕುರಿತು ನೋಟಿಸ್ ನೀಡುವಿಕೆ ಹಾಗೂ ವಿಲೇವಾರಿ ಪ್ರಕ್ರಿಯೆ ನಡೆಯಲಿದೆ. ಅಕ್ಟೋಬರ್ 7ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು.
ವಿಶೇಷ ಸಮಗ್ರ ಪರಿಷ್ಕರಣೆಯ ಉದ್ದೇಶವು ಎಲ್ಲಾ ಅರ್ಹ ನಾಗರೀಕರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವುದಾಗಿದೆ. ಈ ವಿಶೇಷ ಸಮಗ್ರ ಪರಿಷ್ಕರಣೆ ಅವಧಿಯಲ್ಲಿ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದನ್ನು ಪರಿಶೀಲಿಸಿ ಮತ್ತು ಖಚಿತಪಡಿಸಿಕೊಳ್ಳಲು ತಿಳಿಸಲಾಗಿದೆ.
ಮತದಾರರ ಪಟ್ಟಿಯಲ್ಲಿ ಇರುವ ಎಲ್ಲಾ ಮತದಾರರಿಗೆ ಫಾರಂ ಗಳನ್ನು ವಿತರಿಸಲಾಗಿದ್ದು, ಜೂನ್ 30 ರಿಂದ ಜುಲೈ 29 ರವರೆಗೆ ಬೂತ್ ಮಟ್ಟದ ಅಧಿಕಾರಿಗಳು ಮನೆಗಳಿಗೆ ಭೇಟಿ ನೀಡುತ್ತಾರೆ. ನಿಮ್ಮ ಎನ್ಯೂಮರೇಶನ್ ಫಾರಂಗಳನ್ನು ದ್ವಿಪ್ರತಿಯಲ್ಲಿ ಒದಗಿಸಿ ಫಾರಂ ಭರ್ತಿ ಮಾಡಲು ನೆರವಾಗುತ್ತಾರೆ. ಭರ್ತಿ ಮಾಡಿದ ಫಾರಂಗಳನ್ನು ಸಂಗ್ರಹಿಸುತ್ತಾರೆ. ಬೂತ್ ಮಟ್ಟದ ಅಧಿಕಾರಿ ನೀಡುವ ಎರಡು ಫಾರಂಗಳನ್ನು ಮತದಾರರು ಭರ್ತಿ ಮಾಡಬೇಕು ಎಂದು ಹೇಳಲಾಗಿದೆ.