ಲೇಖನಿಯ ಮೂಲಕ ಸಮಾಜದ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸುತ್ತಾ, ಸದಾ ಬೌದ್ಧಿಕ ಮತ್ತು ವೈಚಾರಿಕ ಆಲೋಚನೆಗಳಿಗೆ ಮುನ್ನುಡಿ ಬರೆಯುತ್ತಿದ್ದ ಕ್ರಿಯಾಶೀಲ ವ್ಯಕ್ತಿ ಎನ್. ಎಸ್. ಶಂಕರ್ ಅವರ ನಿಧನದ ಸುದ್ದಿ ತೀವ್ರ ಬೇಸರ ತಂದಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಪತ್ರಕರ್ತರಾಗಿ, ಸಿನಿಮಾ ನಿರ್ದೇಶಕರಾಗಿ, ಜನಪ್ರಿಯ ಅಂಕಣಕಾರರಾಗಿ ಗುರುತಿಸಿಕೊಂಡಿದ್ದ ಅವರು, ಕನ್ನಡ ದಲಿತ ಸಾಹಿತ್ಯ ಕ್ಷೇತ್ರಕ್ಕೆ ಹಲವು ಪ್ರಶಂಸನೀಯ ಕೃತಿಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಅವರ ಅಗಲಿಕೆ ಮಾಧ್ಯಮ ಕ್ಷೇತ್ರ ಹಾಗೂ ಸಾಹಿತ್ಯ ವಲಯಕ್ಕೆ ತುಂಬಲಾರದ ನಷ್ಟ. ಭಗವಂತನು ಮೃತರ ಆತ್ಮಕ್ಕೆ ಸದ್ಗತಿಯನ್ನು ನೀಡಲಿ, ಅವರ ಕುಟುಂಬಸ್ಥರಿಗೆ ಹಾಗೂ ಹಿತೈಷಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿ ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.
ಸಿದ್ಧರಾಮಯ್ಯ ಸಂತಾಪ
ಹಿರಿಯ ಪತ್ರಕರ್ತ ಮತ್ತು ಪ್ರತಿಭಾವಂತ ಚಿತ್ರ ನಿರ್ದೇಶಕ ಮತ್ತು ಪ್ರಗತಿಪರ ಚಳವಳಿಗಳ ಒಡನಾಡಿಯಾಗಿದ್ದ ಎನ್.ಎಸ್.ಶಂಕರ್ ಅವರ ಸಾವಿನ ಸುದ್ದಿ ಕೇಳಿ ದು:ಖವಾಯಿತು ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ.
ಪ್ರಜಾವಾಣಿ, ಮುಂಗಾರು, ಸುದ್ದಿಸಂಗಾತಿ ಮತ್ತು ಲಂಕೇಶ್ ಪತ್ರಿಕೆಯಲ್ಲಿ ಕೆಲಸ ಮಾಡಿದ್ದ ಶಂಕರ್, ಹಲವು ಸಿನೆಮಾಗಳನ್ನು ನಿರ್ದೇಶನ ಮಾಡಿದ್ದರು. ಅವರೊಬ್ಬ ಕನ್ನಡದ ಬಹುಮುಖ ಪ್ರತಿಭೆ. ಇನ್ನಷ್ಟು ಕಾಲ ನಮ್ಮ ಜೊತೆ ಇದ್ದು, ನಮಗೆಲ್ಲ ಮಾರ್ಗದರ್ಶನ ನೀಡಬೇಕಾಗಿತ್ತು. ಅವರ ಕುಟುಂಬವರ್ಗಕ್ಕೆ ಸಂತಾಪಗಳು, ಅವರೆಲ್ಲರ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಸಿದ್ಧರಾಮಯ್ಯ ತಿಳಿಸಿದ್ದಾರೆ.