ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಕಾರ್ಯಾಚರಣೆಯ ವ್ಯಾಪ್ತಿ ವಿಸ್ತರಿಸಿರುವ ಹಿನ್ನೆಲೆಯಲ್ಲಿ ‘ವಿಸ್ತಾರ ಮಾಸಿಕ ಬಸ್ ಪಾಸ್’ ದರ ಏರಿಕೆ ಮಾಡಿ ಆದೇಶ ಹೊರಡಿಸಿದೆ. ಪರಿಷ್ಕೃತ ದರ ಇಂದಿನಿಂದಲೇ ಜಾರಿಗೆ ಬರಲಿದೆ.
ಬಿಎಂಟಿಸಿ ಬಸ್ಗಳ ಕಾರ್ಯವ್ಯಾಪ್ತಿ ವಿಸ್ತರಿಸಲ್ಪಟ್ಟಿರುವುದರಿಂದ ದೀರ್ಘ ಪ್ರಯಾಣದ ಬಸ್ ಪಾಸ್ ದರವನ್ನು 1200 ರೂ.ನಿಂದ 1500 ರೂ.ಗೆ ಹೆಚ್ಚಳ ಮಾಡಲಾಗಿದೆ. ಆದರೆ, ಸಾಮಾನ್ಯ ಮಾಸಿಕ ಬಸ್ ಪಾಸಿನ ದರ 1200 ರೂ. ಮುಂದುವರಿಯಲಿದೆ.
ಬೆಂಗಳೂರಿನ ಹೊರವಲಯದ ಜಿಲ್ಲೆ ಹಾಗೂ ತಾಲೂಕುಗಳಿಗೆ ಪ್ರಯಾಣಿಸುವವರಿಗಾಗಿ ‘ವಿಸ್ತಾರ ಮಾಸಿಕ ಪಾಸ್ ಪರಿಚಯಿಸಲಾಗುತ್ತಿದ್ದು, ಅದಕ್ಕೆ ದರ 1500 ರೂ. ನಿಗದಿಪಡಿಸಲಾಗಿದೆ. ಟಿಕೆಟ್ ದರ ಏರಿಕೆಗೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ (ಕಾರ್ಯಾಚರಣೆ) ಪ್ರಭಾಕರ್ ರೆಡ್ಡಿ ಅವರ ಪ್ರಕಾರ, ಈ ಹಿಂದೆ ಬೆಂಗಳೂರು ನಗರ ಕೇಂದ್ರದಿಂದ ಕೇವಲ 40 ರಿಂದ 50 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸಂಚರಿಸುತ್ತಿದ್ದ ಬಸ್ಸುಗಳು, ಈಗ ಸರ್ಕಾರದ ಆದೇಶದಂತೆ 65 ರಿಂದ 70 ಕಿಲೋಮೀಟರ್ ದೂರದ ಕನಕಪುರ, ರಾಮನಗರ, ಚನ್ನಪಟ್ಟಣ, ಮಾಗಡಿ, ಚಿಕ್ಕಬಳ್ಳಾಪುರ ಮತ್ತು ಮಾಲೂರು ವರೆಗೂ ಸಂಚಾರ ವಿಸ್ತರಿಸಿವೆ. ಈ ವಿಸ್ತರಿತ ಪ್ರದೇಶಗಳಲ್ಲಿ ಸಂಚರಿಸುವ ಸಾರ್ವಜನಿಕರ ಅನುಕೂಲಕ್ಕಾಗಿ 1500 ರೂಪಾಯಿಯ ವಿಸ್ತಾರ ಮಾಸಿಕ ಪಾಸ್ ನೀಡಲಾಗುತ್ತಿದೆ. ನಗರದ ಒಳಗಡೆ ಪ್ರಯಾಣಿಸುವವರಿಗೆ ಹಳೆಯ 1200 ರೂಪಾಯಿಯ ಪಾಸುಗಳೇ ಸಿಗಲಿವೆ.
ಇದೇ ವೇಳೆ ಬಿಎಂಟಿಸಿಯ ವಜ್ರ (AC) ಬಸ್ಸುಗಳ ಮಾಸಿಕ ಪಾಸ್ ದರವನ್ನು ಸಹ ಹೆಚ್ಚಿಸಲು ನಿಗಮ ಸಿದ್ಧತೆ ನಡೆಸಿದೆ. ಸದ್ಯ 2000 ರೂಪಾಯಿ ಇರುವ ಎಸಿ ಬಸ್ ತಿಂಗಳ ಪಾಸನ್ನು 2500 ರೂಪಾಯಿಗೆ ಏರಿಕೆ ಮಾಡಲು ಯೋಜನೆ ರೂಪಿಸಿದೆ.