ಬೆಂಗಳೂರು: ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರಾಜ್ಯದ ನಾಲ್ಕೂ ರಸ್ತೆ ಸಾರಿಗೆ ನಿಗಮಗಳಿಗೆ ನೆರವಾಗಲು ರಾಜ್ಯ ಸರ್ಕಾರವು ಮುಂದಾಗಿದ್ದು, ವಿವಿಧ ಸಹಾಯಧನ ಹಾಗೂ ಬಾಕಿ ಪಾವತಿಗಾಗಿ ಒಟ್ಟು 593.99 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿ ಅಧಿಕೃತ ಆದೇಶ ಹೊರಡಿಸಿದೆ. ಡೀಸೆಲ್ ಪೂರೈಕೆದಾರರಿಗೆ ಹಾನಿಯಾಗದಂತೆ ಮತ್ತು ಬಸ್ ಸೇವೆಗಳಲ್ಲಿ ಯಾವುದೇ ವ್ಯತ್ಯಯವಾಗದಂತೆ ಎಚ್ಚರಿಕೆ ವಹಿಸಲು ಈ ಹಣವು ನೆರವಾಗಲಿದೆ.
ಕೆಲ ದಿನಗಳ ಹಿಂದೆ ಡೀಸೆಲ್ ಬಾಕಿ ಪಾವತಿಸದ ಕಾರಣ ಕೆಲವು ಡಿಪೋಗಳಲ್ಲಿ ಬಸ್ ಸೇವೆ ವ್ಯತ್ಯಯವಾಗಿತ್ತು. ನಾಲ್ಕೂ ನಿಗಮಗಳು ಡೀಸೆಲ್ ಬಾಕಿ ಮತ್ತು ಸಾಲದ ಸುಳಿಗೆ ಸಿಲುಕಿ ಸಾವಿರಾರು ಕೋಟಿ ರೂ.ಗಳ ಹೊಣೆಗಾರಿಕೆ ಹೊಂದಿವೆ. ಈ ಹಿನ್ನೆಲೆಯಲ್ಲಿ, 2026-27ನೇ ಸಾಲಿನಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ವಿತರಿಸಲಾದ 1.97 ಲಕ್ಷ ಉಚಿತ ಬಸ್ ಪಾಸ್‌ಗಳ ಪೈಕಿ ಸರ್ಕಾರದಿಂದ ಬರಬೇಕಿದ್ದ 286.08 ಕೋಟಿ ರೂ.ಗಳಲ್ಲಿ ಇದೀಗ ಹಂತ ಹಂತವಾಗಿ 63.99 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.
ಪ್ರತಿದಿನ 26 ಸಾವಿರ ಬಸ್‌ಗಳಿಗೆ 16.26 ಲಕ್ಷ ಲೀಟರ್ ಡೀಸೆಲ್ ಅವಶ್ಯಕತೆಯಿದ್ದು, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ (HPCL) ಸಂಸ್ಥೆಗೆ ಒಟ್ಟು 1124.91 ಕೋಟಿ ರೂ. ಬಾಕಿ ಪಾವತಿಸಬೇಕಿದೆ. ಸಾರಿಗೆ ನಿಗಮಗಳ ಈ ಬಿಕ್ಕಟ್ಟನ್ನು ನಿವಾರಿಸಲು ಹಾಗೂ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸರಾಗವಾಗಿ ಮುಂದುವರಿಯಲು ಸರ್ಕಾರದ ಈ ಅನುದಾನ ಬಿಡುಗಡೆ ಮಹತ್ವದ ಹೆಜ್ಜೆಯಾಗಿದೆ.