ಬೆಂಗಳೂರು: ದೂರದ ಊರುಗಳಿಗೆ ಬಿಎಂಟಿಸಿ ವಿಸ್ತಾರ ಪಾಸ್ ಪರಿಚಯಿಸಲಾಗಿದ್ದು, ಪ್ರಯಾಣ ವ್ಯಾಪ್ತಿಯನ್ನು 70 ಕಿಲೋಮೀಟರ್ ವರೆಗೆ ವಿಸ್ತರಿಸಲಾಗಿದೆ.
ಬಿಎಂಟಿಸಿ ಸಾಮಾನ್ಯ ಮಾಸಿಕ ಪಾಸಿನ ದರದಲ್ಲಿ ಯಾವುದೇ ಹೆಚ್ಚಳ ಮಾಡಿಲ್ಲ. ಬಿಎಂಟಿಸಿ ದೂರದ ಮಾರ್ಗಗಳ ಪ್ರಯಾಣಿಕರ ಅನುಕೂಲಕ್ಕಾಗಿ ಸಾಮಾನ್ಯ ವಿಸ್ತಾರ ಪಾಸ್ ಗಳನ್ನು ಪರಿಚಯಿಸಲಾಗಿದೆ. ಬಿಎಂಟಿಸಿ ಕಾರ್ಯಾಚರಣೆ ವ್ಯಾಪ್ತಿಯನ್ನು 65 ರಿಂದ 75 ಕಿ.ಮೀ ಅವರಿಗೆ ವಿಸ್ತರಿಸಲಾಗಿದ್ದು, ಕನಕಪುರ, ರಾಮನಗರ, ಚನ್ನಪಟ್ಟಣ, ಮಾಗಡಿ, ಚಿಕ್ಕಬಳ್ಳಾಪುರ, ಮಾಲೂರು ಸೇರಿದಂತೆ ಬೆಂಗಳೂರು ನಗರದ ಸುತ್ತಮುತ್ತಲಿನ ಪ್ರಮುಖ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಿಗೆ ಬಿಎಂಟಿಸಿ ಸೇವೆ ನೀಡುತ್ತಿದೆ.
ಹೊಸ ಕಾರ್ಯಚರಣಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಉದ್ದೇಶದಿಂದ ನಗರದ ಕೇಂದ್ರ ಭಾಗದಿಂದ 40 ಕಿಲೋಮೀಟರ್ ವರೆಗಿನ ಪ್ರದೇಶವನ್ನು ಸೀಮಿತ ವ್ಯಾಪ್ತಿ, ಅದರ ಆಚೆಗಿನ ಪ್ರದೇಶವನ್ನು ವಿಸ್ತಾರ ವ್ಯಾಪ್ತಿ ಎಂದು ವರ್ಗೀಕರಣ ಮಾಡಲಾಗಿದೆ.
ವಿಸ್ತಾರ ವ್ಯಾಪ್ತಿಯ ಮಾರ್ಗದಲ್ಲಿ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಜೂನ್ 2ರಿಂದ ಸಾಮಾನ್ಯ, ವಿಸ್ತಾರ ದೈನಿಕ, ಸಾಪ್ರಾಹಿಕ ಮತ್ತು ಮಾಸಿಕ ಪಾಸ್ ಗಳನ್ನು ಪರಿಚಯಿಸಲಾಗಿದೆ. ಪ್ರಸ್ತುತ 1819 ಮಾರ್ಗಗಳಲ್ಲಿ 6295 ಅನುಸೂಚಿಗಳ ಕಾರ್ಯಾಚರಣೆ ಮಾಡಲಾಗುತ್ತಿದ್ದು, ಅವುಗಳಲ್ಲಿ 96 ಮಾರ್ಗಗಳ 216 ಅನುಸೂಚಿಗಳು ವಿಸ್ತಾರ ವ್ಯಾಪ್ತಿಯಲ್ಲಿ ಸೇವೆ ನೀಡುತ್ತಿವೆ. ಸಾಮಾನ್ಯ ವಿಸ್ತಾರ ದೈನಿಕ ಪಾಸುಗಳ ಬೆಲೆ 120 ರೂ., ಮಾಸಿಕ ಪಾಸ್ ದರ 1500 ರೂ. ನಿಗದಿಪಡಿಸಲಾಗಿದೆ.