ಬೆಂಗಳೂರು: ರಾಜಧಾನಿ ಬೆಂಗಳೂರು ಉತ್ತರ ತಾಲೂಕಿನ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾಂಪೌಂಡ್ ಗೋಡೆ ಕುಸಿದು ಐದು ವರ್ಷದ ಬಾಲಕ ಮೃತಪಟ್ಟಿದ್ದಾನೆ.
ಯಾದಗಿರಿ ಮೂಲದ ದಾವಲಸಾಬ್ ಅವರ ಪುತ್ರ ಅಫೀನ್(5) ಮೃತಪಟ್ಟ ಬಾಲಕ. ಚಾಲಕರಾಗಿರುವ ದಾವಲಸಾಬ್ ಬೆಂಗಳೂರಿನಲ್ಲಿ ಹೊಸ ಕೆಲಸದ ಹುಡುಕಾಟದಲ್ಲಿದ್ದರು. ಅವರ ಪತ್ನಿ ಹಾಗೂ ಮಗು ಆಫೀನ್ ಐದು ದಿನಗಳ ಹಿಂದೆ ಬಾಗಲೂರು ಬಂಡಿಕೊಡಿಗೆಹಳ್ಳಿಯ ತಮ್ಮ ತಂಗಿಯ ಮನೆಗೆ ಬಂದಿದ್ದರು. ಬುಧವಾರ ಸಂಜೆ ಅಫೀನ್ ನೆರೆಮನೆಯ ಮಕ್ಕಳೊಂದಿಗೆ ಆಟವಾಡುತ್ತಿದ್ದಾಗ ಮನೆಯೊಂದರ ಕಾಂಪೌಂಡ್ ಗೋಡೆ ಮತ್ತು ಗೇಟ್ ಬಿದ್ದು ದುರಂತ ಸಂಭವಿಸಿದೆ.
ಅಫೇನ್ ಪಕ್ಕದ ಮನೆಯ ಮಕ್ಕಳೊಂದಿಗೆ ಬಿ.ಸಿ. ನರಸಪ್ಪ ಎಂಬುವರ ಮನೆಯ ಕಾಂಪೌಂಡ್ ಗೇಟ್ ಬಳಿ ಆಟವಾಡುತ್ತಿದ್ದಾಗ ಮಕ್ಕಳು ಆಟದ ವೇಳೆ ಕಬ್ಬಿಣದ ಗೇಟ್ ಹಿಡಿದು ಜಿಕಾಡಿದ್ದಾರೆ. ಕಾಂಪೌಂಡ್ ಗೋಡೆಯು ಗೇಟ್ ಸಮೇತ ಮಕ್ಕಳ ಮೇಲೆ ಬಿದ್ದಿದೆ. ಕೂಡಲೇ ಸ್ಥಳೀಯರು ಧಾವಿಸಿ ಬಂದು ಮಕ್ಕಳನ್ನು ಅವಶೇಷಗಳಡಿಯಿಂದ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ತಲೆ ಹಾಗೂ ಎದೆಯ ಭಾಗಕ್ಕೆ ತೀವ್ರ ಪೆಟ್ಟಾಗಿದ್ದ ಅಫೀನ್ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮಾರ್ಗ ಮಧ್ಯದಲ್ಲೇ ಮೃತಪಟ್ಟಿದ್ದಾನೆ. ಗಂಭೀರವಾಗಿ ಗಾಯಗೊಂಡ ಮತ್ತೊಂದು ಮಗು ಸಮನ್ವಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಗಲೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.