ಮೈಸೂರು: ಸಮಾಜ ಟೇಕಿಸುತ್ತದೆ ಎನ್ನುವ ಭಯದಲ್ಲಿ ಹೆತ್ತ ತಾಯಿಯೇ ನವಜಾತ ಶಿಶುವನ್ನು ರಸ್ತೆ ಬದಿ ಎಸೆದು ಪರಾರಿಯಾದ ಘಟನೆ ಮೈಸೂರಿನಲ್ಲಿ ನಡೆದಿದೆ. ಮಂಡಿ ಠಾಣೆ ಪೊಲೀಸರು ಕೃತ್ಯ ಎಸಗಿದ ಮಹಿಳೆಯನ್ನು ಬಂಧಿಸಿದ್ದಾರೆ.
ಆಟೋದಲ್ಲಿ ತೆರಳುತ್ತಿದ್ದ ವೇಳೆ ಮಹಿಳೆಗೆ ಹೆರಿಗೆಯಾಗಿದ್ದು, ಹೆಣ್ಣು ಶಿಶುವನ್ನು ಗರ್ಭ ಚೀಲ ಸಹಿತ ರಸ್ತೆ ಬದಿಗೆ ಎಸೆದಿದ್ದರಿಂದ ಶಿಶು ಮೃತಪಟ್ಟಿದ್ದು ಜೂನ್ 14ರಂದು ಪುಲಕೇಶಿ ರಸ್ತೆಯ ಬಡೆಮಕಾನ್ ಸಮೀಪ ಹೆಣ್ಣು ಶಿಶು ಶವ ಪತ್ತೆಯಾಗಿದ್ದು, ಮಂಡಿಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು.
ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಆಟೋದಲ್ಲಿ ತೆರಳುತ್ತಿದ್ದ ಮಹಿಳೆಯೊಬ್ಬರು ನವಜಾತ ಶಿಶುವನ್ನು ಎಸೆದಿರುವುದು ಗೊತ್ತಾಗಿದೆ. ಆಟೋ ಪತ್ತೆ ಮಾಡಿದ ಪೊಲೀಸರು ಚಾಲಕ ನೀಡಿದ ಮಾಹಿತಿ ಮೇರೆಗೆ ಮಹಿಳೆಯ ಮಳೆಯ ವಿಳಾಸ ಪತ್ತೆ ಮಾಡಿದ್ದಾರೆ.
ನಂತರ ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮಹಿಳೆಗೆ 40 ವರ್ಷವಾಗಿದ್ದು, 21 ವರ್ಷದ ಪುತ್ರ, 14 ಮತ್ತು 13 ವರ್ಷದ ಇಬ್ಬರು ಪುತ್ರಿಯರಿದ್ದಾರೆ. ಪುತ್ರನಿಗೆ ಮದುವೆಯಾಗಿದ್ದು, ಈ ವಯಸ್ಸಲ್ಲಿ ನನಗೆ ಮಗುವಾಗಿದೆ ಎಂದು ಗೊತ್ತಾದರೆ ಸಮಾಜ ಟೀಕಿಸುತ್ತದೆ ಮತ್ತು ಟೀಕೆ ಎದುರಿಸಲು ಕಷ್ಟವಾಗುತ್ತದೆ ಎಂದು ನವಜಾತ ಶಿಶುವನ್ನು ಎಸೆದಿರುವುದಾಗಿ ಮಹಿಳೆ ತಪ್ಪೊಪ್ಪಿಕೊಂಡಿದ್ದಾಳೆ.