ಬೆಂಗಳೂರು: ಬಿಡದಿ ಟೌನ್ ಶಿಪ್ ನಿರ್ಮಾಣ ಯೋಜನೆ ವಿರೋಧಿಸಿ ರೈತರು ಹೋರಾಟ ನಡೆಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ನಿಯೋಗ ಇಂದು ಸಂಬಂಧಿಸಿದ ಗ್ರಾಮಗಳಿಗೆ ಭೇಟಿ ನೀಡಲಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್ ಮತ್ತು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ, ಮಾಜಿ ಡಿಸಿಎಂ ಅಶ್ವತ್ಥ್ ನಾರಾಯಣ, ಮಾಜಿ ಸಚಿವ ಎಸ್.ಸುರೇಶ್ ಕುಮಾರ್ ಸೇರಿದಂತೆ ಹಲವು ನಾಯಕರು ನಿಯೋಗದಲ್ಲಿ ತೆರಳಿದ್ದಾರೆ.
ಬಿಡದಿಯ ಕೆಂಪಯ್ಯನಪಾಳ್ಯ, ಅರಳಾಳುಸಂದ್ರ, ಬನ್ನಿಗಿರಿ, ಹೊಸೂರು ಮೊದಲಾದ ಗ್ರಾಮಗಳಿಗೆ ನಿಯೋಗ ಭೇಟಿ ನೀಡಲಿದ್ದು, ರೈತರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಜೆಡಿಎಸ್ ಕೂಡ ಬಿಡದಿ ಟೌನ್‌ಶಿಪ್ ಗೆ ವಿರೋಧ ವ್ಯಕ್ತಪಡಿಸಿದ್ದು, ಜೂನ್ 21ರಿಂದ ಪಾದಯಾತ್ರೆಗೆ ಕರೆ ನೀಡಿದೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಭಾಗವಹಿಸಲಿದ್ದಾರೆ. ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕೂಡ ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ಪ್ರತಿಭಟನೆ ಜೊತೆಗೆ ಕಾನೂನು ಹೋರಾಟ ನಡೆಸಿ ನೊಂದ ರೈತರಿಗೆ ನ್ಯಾಯ ಕೊಡಿಸುವ ಭರವಸೆ ನೀಡಿದ್ದಾರೆ.