ಬೆಳಗಾವಿ: ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣನವರ್ ಗೆ ನ್ಯಾಯಾಲಯ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ಹಿಂಡಲಗಾ ಕೇಂದ್ರ ಕಾರಾಗೃಹದಿಂದ ಶಿವಾನಂದ ನೀಲಣ್ಣನವರ್ ಬಿಡುಗಡೆಯಾಗಿದ್ದಾರೆ.
ಠೇವಣಿ ಹಣಕ್ಕೆ ಹೆಚ್ಚಿನ ಬಡ್ಡಿ ನೀಡುವುದಾಗಿ ವಂಚಿಸಲಾಗಿದೆ ಎನ್ನುವ ಆರೋಪದಡಿ ಶಿವಾನಂದ ನೀಲಣ್ಣನವರ್ ಅವರನ್ನು ಮೇ 15ರಂದು ಬೆಳಗಾವಿಯ ಮಾಳ ಮಾರುತಿ ಠಾಣೆ ಪೋಲೀಸರು ಬಂಧಿಸಿದ್ದರು. ನಂತರ ತನಿಖೆ ನಡೆಸಿದ ಸಿಐಡಿ ಅಧಿಕಾರಿಗಳು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
ಜೂನ್ 12ರಂದು ಬೆಂಗಳೂರಿನ 92ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದು, ಸೋಮವಾರ ರಾತ್ರಿ ಜೈಲಿನಿಂದ ಹೊರ ಬಂದ ಶಿವಾನಂದ ನೀಲಣ್ಣನವರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಓಂ ನಮಃ ಶಿವಾಯ, ಎಲ್ಲರಿಗೂ ಒಳ್ಳೆಯದಾಗಬೇಕು ಎಂದು ಬಯಸುವ ವ್ಯಕ್ತಿ ನಾನು. ಬೇರೆ ಏನನ್ನೂ ಹೇಳುವುದಿಲ್ಲ ಎಂದು ಹೇಳಿ ತೆರಳಿದ್ದಾರೆ.