ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಬ್ಯಾಂಕಾಕ್‌ನಿಂದ ಅಕ್ರಮವಾಗಿ ಬೆಂಗಳೂರಿಗೆ ಸಾಗಿಸುತ್ತಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾವನ್ನು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಜಪ್ತಿ ಮಾಡಿದ್ದಾರೆ.
ಕಸ್ಟಮ್ಸ್ ಇಲಾಖೆಯ ತಪಾಸಣೆ ವೇಳೆ ಲಗೇಜ್ ಬ್ಯಾಗ್‌ನಲ್ಲಿ ಅಡಗಿಸಿಡಲಾಗಿದ್ದ ಒಟ್ಟು 38.34 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣ ಸಂಬಂಧ 6 ಪ್ರಯಾಣಿಕರನ್ನು ಬಂಧಿಸಲಾಗಿದೆ.
ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ನೀಡಿದ ಅಧಿಕೃತ ಮಾಹಿತಿಯ ಪ್ರಕಾರ, ಜೂನ್ 11, 2026ರಂದು ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಬಂದಿಳಿದ 5 ಜನ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಿದಾಗ ಗಾಂಜಾ ಕಳ್ಳಸಾಗಣೆ ಬೆಳಕಿಗೆ ಬಂದಿದೆ. ಈ ಆರೋಪಿಗಳು ವಿಮಾನ ನಿಲ್ದಾಣದಲ್ಲಿ ತಪಾಸಣೆಯಿಂದ ತಪ್ಪಿಸಿಕೊಳ್ಳಲು ತಮ್ಮ ಚೆಕ್-ಇನ್ ಬ್ಯಾಗೇಜ್‌ಗಳ ಒಳಗೆ ಗಾಂಜಾವನ್ನು ಅಡಗಿಸಿಟ್ಟಿದ್ದರು.
ಅಧಿಕಾರಿಗಳು ಬ್ಯಾಗ್‌ಗಳನ್ನು ಕೂಲಂಕಷವಾಗಿ ಸ್ಕ್ಯಾನ್ ಮಾಡಿದಾಗ ಒಟ್ಟು 24.8 ಕೆಜಿ ತೂಕದ ಅತ್ಯಾಧುನಿಕ ಹೈಡ್ರೋಪೋನಿಕ್ ಗಾಂಜಾ ಪತ್ತೆಯಾಗಿದೆ. ಇದರ ಅಂತರರಾಷ್ಟ್ರೀಯ ಮಾರುಕಟ್ಟೆ ಮೌಲ್ಯ ಸುಮಾರು 8.68 ಕೋಟಿ ರೂ. ಎಂದು ಅಂದಾಜಿಸಲಾಗಿದ್ದು, ಐದೂ ಜನರನ್ನು ಬಂಧಿಸಲಾಗಿದೆ.
ಜೂನ್ 13, 2026ರಂದು ಬ್ಯಾಂಕಾಕ್‌ನಿಂದಲೇ ಬಂದ ಮತ್ತೊಂದು ವಿಮಾನದ ಪ್ರಯಾಣಿಕನ ಮೇಲೆ ಕಸ್ಟಮ್ಸ್ ಕಣ್ಣಿಟ್ಟಿತ್ತು. ಬೆಂಗಳೂರಿಗೆ ಬಂದಿಳಿದ ಓರ್ವ ಶಂಕಿತ ಪ್ರಯಾಣಿಕನನ್ನು ತಡೆದು ಆತನ ಚೆಕ್-ಇನ್ ಬ್ಯಾಗ್ ಹಾಗೂ ಹ್ಯಾಂಡ್ ಲಗೇಜ್ ಬ್ಯಾಗ್‌ಗಳನ್ನು ಪರಿಶೀಲಿಸಿದಾಗ ಬ್ಯಾಗ್‌ನಲ್ಲೂ ಕೂಡ ವ್ಯಾಕ್ಯೂಮ್ ಪ್ಯಾಕ್ ಮಾಡಲಾಗಿದ್ದ 13.54 ಕೆಜಿ ಹೈಡ್ರೋಪೋನಿಕ್ ಗಾಂಜಾ ಪತ್ತೆಯಾಗಿದೆ. ಇದರ ಒಟ್ಟು ಮೌಲ್ಯ 4.74 ಕೋಟಿ ರೂ. ಆಗಿದೆ.
ಈ ಎರಡೂ ಪ್ರತ್ಯೇಕ ಕಾರ್ಯಾಚರಣೆಗಳಿಂದ ಕಸ್ಟಮ್ಸ್ ಇಲಾಖೆಯು ಒಟ್ಟು 13.14 ಕೋಟಿ ರೂ. ಮೌಲ್ಯದ 38.34 ಕೆಜಿ ಹೈಡ್ರೋಪೋನಿಕ್ ಗಾಂಜಾವನ್ನು ವಶಕ್ಕೆ ಪಡೆದಂತಾಗಿದೆ. ಬಂಧಿತ 6 ಜನ ಆರೋಪಿಗಳ ವಿರುದ್ಧ ಮಾದಕ ದ್ರವ್ಯ ನಿಯಂತ್ರಣ ಕಾಯ್ದೆಯಾದ ಎನ್‌ಡಿಪಿಎಸ್ (NDPS Act) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.