ಬೆಂಗಳೂರು: ರಾಜ್ಯದಲ್ಲಿ ಶೈಕ್ಷಣಿಕ ವರ್ಷ ಆರಂಭಗೊಂಡು ಹಲವು ದಿನಗಳು ಕಳೆದಿದ್ದರೂ, ಪದವಿ ಪೂರ್ವ (ಪಿಯು) ಕಾಲೇಜುಗಳ ವಿದ್ಯಾರ್ಥಿಗಳಿಗೆ ಇನ್ನೂ ಪಠ್ಯಪುಸ್ತಕಗಳು ಲಭ್ಯವಾಗಿಲ್ಲ. ಇದರಿಂದ ಪರೀಕ್ಷಾ ಸಿದ್ಧತೆಯಲ್ಲಿ ತೊಡಗಬೇಕಾದ ವಿದ್ಯಾರ್ಥಿಗಳು ಪರದಾಡುವಂತಾಗಿದ್ದು, ಶಿಕ್ಷಣ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪ್ರತಿ ವರ್ಷ ಶೈಕ್ಷಣಿಕ ವರ್ಷ ಆರಂಭದ ಮೊದಲೇ ಪಠ್ಯಪುಸ್ತಕಗಳನ್ನು ವಿದ್ಯಾರ್ಥಿಗಳ ಕೈಸೇರುವಂತೆ ಮಾಡುವಲ್ಲಿ ಶಿಕ್ಷಣ ಇಲಾಖೆ ಎಡವುತ್ತಿದೆ. ಈ ಬಾರಿ ಪ್ರವೇಶ ಪ್ರಕ್ರಿಯೆ ಮುಗಿದು ತರಗತಿಗಳು ಆರಂಭವಾಗಿರುವ ಹೊರತಾಗಿಯೂ, ಪಠ್ಯಪುಸ್ತಕಗಳು ಕಾಲೇಜುಗಳಿಗೆ ಪೂರೈಕೆಯಾಗಿಲ್ಲ..
ಬೆಂಗಳೂರು, ಯಾದಗಿರಿ, ಹಾಸನ, ತುಮಕೂರು, ಮೈಸೂರು, ಬಳ್ಳಾರಿ ಹಾಗೂ ರಾಯಚೂರು ಸೇರಿದಂತೆ ಕನಿಷ್ಠ ಏಳು ಜಿಲ್ಲೆಗಳ ಸರ್ಕಾರಿ ಪಿಯು ಕಾಲೇಜುಗಳಿಗೆ ಭಾಗಶಃ ಪುಸ್ತಕಗಳು ಮಾತ್ರ ತಲುಪಿವೆ. ಬಂದಿರುವ ಪುಸ್ತಕಗಳು ವಿದ್ಯಾರ್ಥಿಗಳಿಗೆ ಸಾಕಾಗುತ್ತಿಲ್ಲ. ಪಿಯು ಶಿಕ್ಷಣ ಅತ್ಯಂತ ಮಹತ್ವದ ಹಂತವಾಗಿದೆ. ಶ್ರೀಮಂತ ಕುಟುಂಬಗಳ ವಿದ್ಯಾರ್ಥಿಗಳು ಖಾಸಗಿ ಸಂಪನ್ಮೂಲಗಳು, ಡಿಜಿಟಲ್ ಸಾಧನಗಳು ಮತ್ತು ಇತರ ಅಧ್ಯಯನ ಸಾಮಗ್ರಿಗಳನ್ನು ಬಳಸಿಕೊಳ್ಳಬಹುದು. ಆದರೆ ಬಡ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕಗಳೇ ಪ್ರಮುಖ ಕಲಿಕಾ ಸಾಧನ. ಆದ್ದರಿಂದ ಮುಖ್ಯಮಂತ್ರಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂಬುದು ವಿದ್ಯಾರ್ಥಿಗಳ ಆಳಲು.
ಪಠ್ಯಪುಸ್ತಕಗಳಿಲ್ಲದೆ ಪಾಠಗಳನ್ನು ಅರ್ಥಮಾಡಿಕೊಳ್ಳಲು ವಿದ್ಯಾರ್ಥಿಗಳು ಹರಸಾಹಸ ಪಡುತ್ತಿದ್ದಾರೆ. ಡಿಜಿಟಲ್ ಪ್ರತಿಗಳನ್ನು ಅವಲಂಬಿಸುವುದು ಎಲ್ಲರಿಗೂ ಸಾಧ್ಯವಾಗುತ್ತಿಲ್ಲವಾದ್ದರಿಂದ, ಬಡ ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪಠ್ಯಪುಸ್ತಕಗಳ ಪೂರೈಕೆಗಾಗಿ ಪದೇಪದೇ ಮನವಿ ಸಲ್ಲಿಸಿದರೂ, ಇಲಾಖೆಯಿಂದ ಸಮರ್ಪಕ ಉತ್ತರ ದೊರೆಯುತ್ತಿಲ್ಲ ಎಂದು ಕಾಲೇಜು ಆಡಳಿತ ಮಂಡಳಿಗಳು ಅಳಲು ತೋಡಿಕೊಳ್ಳುತ್ತಿವೆ.ಸಕಾಲಕ್ಕೆ ಪಠ್ಯಪುಸ್ತಕಗಳನ್ನು ಮುದ್ರಿಸಿ ವಿತರಿಸುವ ಜವಾಬ್ದಾರಿಯನ್ನು ಹೊಂದಿರುವ ಪದವಿ ಪೂರ್ವ ಶಿಕ್ಷಣ ಇಲಾಖೆಯು, ಈ ಬಾರಿಯ ವಿಳಂಬಕ್ಕೆ ಯಾವುದೇ ಸಮರ್ಪಕ ಕಾರಣವನ್ನು ನೀಡಿಲ್ಲ. “ಪಠ್ಯಪುಸ್ತಕಗಳಿಲ್ಲದೆ ನಾವು ಪರೀಕ್ಷೆಗೆ ತಯಾರಿ ನಡೆಸುವುದಾದರೂ ಹೇಗೆ? ಶಿಕ್ಷಣ ಇಲಾಖೆಯ ಇಂತಹ ಬೇಜವಾಬ್ದಾರಿಯಿಂದ ನಮ್ಮ ಶೈಕ್ಷಣಿಕ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ,” ಎಂದು ವಿದ್ಯಾರ್ಥಿಗಳು ಕಿಡಿಕಾರಿದ್ದಾರೆ.
ಖಾಸಗಿ ಪ್ರಕಾಶಕರ ಪುಸ್ತಕಗಳನ್ನು ದುಬಾರಿ ಬೆಲೆಗೆ ಖರೀದಿಸುವುದು ಬಡ ಪೋಷಕರಿಗೆ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ. ಸರ್ಕಾರಿ ಪುಸ್ತಕಗಳಿಗಾಗಿ ಕಾಯುವ ಬದಲು, ಅನಿವಾರ್ಯವಾಗಿ ಹೊರಗಿನ ಪುಸ್ತಕಗಳತ್ತ ಮುಖ ಮಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ತಕ್ಷಣವೇ ಇಲಾಖೆಯು ಮಧ್ಯಪ್ರವೇಶಿಸಿ, ಎಲ್ಲ ಪಿಯು ಕಾಲೇಜುಗಳಿಗೆ ಅಗತ್ಯವಿರುವ ಪಠ್ಯಪುಸ್ತಕಗಳನ್ನು ಕೂಡಲೇ ತಲುಪಿಸುವ ವ್ಯವಸ್ಥೆ ಮಾಡಬೇಕೆಂದು ವಿದ್ಯಾರ್ಥಿಗಳು ಮತ್ತು ಪೋಷಕರು ಆಗ್ರಹಿಸಿದ್ದಾರೆ.
ಈ ವಿಳಂಬವು ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ತಿಳಿಸಿದ್ದಾರೆ.ಆರ್ಥಿಕವಾಗಿ ಸದೃಢವಾಗಿರುವ ಕುಟುಂಬಗಳ ಮಕ್ಕಳು ಖಾಸಗಿ ಕಾಲೇಜುಗಳಲ್ಲಿ ಓದುತ್ತಾರೆ. ಆದರೆ, ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳು ಮೊಬೈಲ್ ಫೋನ್ ಮತ್ತು ಉಚಿತ ಪಠ್ಯಪುಸ್ತಕಗಳನ್ನೇ ಅವಲಂಬಿಸಬೇಕಾದ ಪರಿಸ್ಥಿತಿಯಲ್ಲಿದ್ದಾರೆ. ಸರ್ಕಾರದ ಈ ನಿರ್ಲಕ್ಷ್ಯ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ದೊಡ್ಡ ಹೊಡೆತ ನೀಡುತ್ತಿದೆ/ಇಂತಹ ನಿರ್ಲಕ್ಷ್ಯದಿಂದ ರಾಜ್ಯದಲ್ಲಿ ಶಿಕ್ಷಣದ ಖಾಸಗೀಕರಣಕ್ಕೆ ಮತ್ತಷ್ಟು ಉತ್ತೇಜನ ಸಿಗುವ ಅಪಾಯವಿದೆ ಎಂದೂ ಅನೇಕ ವಿದ್ಯಾರ್ಥಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
ಈ ಸಮಸ್ಯೆಯು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಮೇಲೆ ಬೀರಬಹುದಾದ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು, ಈ ಕುರಿತು ಅಧಿಕಾರಿಗಳು ಯಾವ ರೀತಿಯ ತುರ್ತು ಕ್ರಮಗಳನ್ನು ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.