ಬೆಂಗಳೂರು: ಬೆಂಗಳೂರು ನಗರದ ಮೊಟ್ಟ ಮೊದಲ ಸುರಂಗ ರಸ್ತೆ ನಿರ್ಮಾಣಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾನುವಾರ ಹೆಬ್ಬಾಳ ಜಂಕ್ಷನ್ ನಲ್ಲಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಹೆಬ್ಬಾಳ ಜಂಕ್ಷನ್ ನಿಂದ ಕೃಷಿ ವಿವಿ ವಸತಿ ಗೃಹದವರೆಗೆ ಮೂರು ಪಥದ 2.28 ಕಿಲೋಮೀಟರ್ ಸುರಂಗ ರಸ್ತೆ ಇದಾಗಿದ್ದು, ಏರ್ಪೋರ್ಟ್ ರಸ್ತೆ ಸಂಚಾರ ದಟ್ಟಣೆ ಕಡಿಮೆ ಮಾಡಲಿದೆ.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಬೆಂಗಳೂರಿನ ಮೊಟ್ಟಮೊದಲ ಸುರಂಗ ರಸ್ತೆ ನಿರ್ಮಾಣಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಭಾನುವಾರ ಬೆಳಿಗ್ಗೆ ಹೆಬ್ಬಾಳ ಜಂಕ್ಷನ್ ನಲ್ಲಿ ಭೂಮಿ ಪೂಜೆ ನೆರವೇರಿಸಲಿದ್ದಾರೆ ಎಂದು ಸಾರಿಗೆ ಸಚಿವ ಭೈರತಿ ಸುರೇಶ್ ತಿಳಿಸಿದ್ದಾರೆ.
ಮೇಖ್ರಿ ಸರ್ಕಲ್ ನಿಂದ ಹೆಬ್ಬಾಳ ಜಂಕ್ಷನ್ ವರೆಗೆ ಭಾರಿ ಸಂಚಾರ ದಟ್ಟಣೆ ಉಂಟಾಗುತ್ತಿದ್ದು, ಇದರಿಂದ ವಿಮಾನ ನಿಲ್ದಾಣ ಸೇರಿದಂತೆ ಇತರೆಡೆ ಹೋಗುವುದು ಕಷ್ಟವಾಗುತ್ತಿತ್ತು. ಈ ಸಮಸ್ಯೆ ನಿವಾರಿಸುವ ಉದ್ದೇಶದಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಸುರಂಗ ರಸ್ತೆ ನಿರ್ಮಾಣಕ್ಕೆ ಮುಂದಾಗಿದೆ.
ಸುಮಾರು 60 ಅಡಿ ಆಳದಲ್ಲಿ ನಿರ್ಮಾಣವಾಗುವ ಸುರಂಗ ರಸ್ತೆಯ ತಲಾ ಒಂದು ಮಾರ್ಗ 3.5 ಮೀಟರ್ ಅಗಲವಿರಲಿದೆ. ಒಟ್ಟು 1139 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆಯನ್ನು 18 ತಿಂಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಯೋಜನೆಗೆ ಯಾವುದೇ ಖಾಸಗಿ ಜಾಗ ಬಳಕೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.