ಬೆಂಗಳೂರು: ಕಳ್ಳರು, ಖದೀಮರು ಯಾವೆಲ್ಲ ವೇಷ ಭೂಷಣಗಳನ್ನು ಧರಿಸಿ ಬಂದು ತಮ್ಮ ಕೈಚಳಕ ತೋರಿಸುತ್ತಾರೆ ಎಂಬುದಕ್ಕೆ ಈ ಘಟನೆ ಸಾಕ್ಷಿ. ಇತ್ತೀಚಿನ ದಿನಗಳಲ್ಲಿ ಕಳ್ಳತನ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನಾಗಾಸಾಧುಗಳ ವೇಷದಲ್ಲಿ ಬಂದ ಖದೀಮರು ವ್ಯಕ್ತಿಯೊಬ್ಬರ ಮನೆಗೆ ಬಂದು ಆಶಿರ್ವಾದ ಮಾಡುವ ನೆಪದಲ್ಲಿ ಚಿನ್ನದ ಉಂಗುರ ಕದ್ದು ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ನಾಗಾಸಾಧುಗಳ ಸೋಗಿನಲ್ಲಿ ಬಂದ ನಕಲಿ ನಾಗಾಸಾಧುಗಳು ಅಮಾಯಕರನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದಾರೆ. ಬೆಂಗಳೂರಿನ ಆರ್‌ಪಿಸಿ ಲೇಔಟ್ ನಿವಾಸಿ ಅರುಣ್ ಶ್ರೀಪಾದ್ ಎಂಬುವವರ ಮನೆಗೆ ಬಂದ ನಾಗಾಸಾಧುಗಳ ವೇಷದಲ್ಲಿದ್ದ ಇಬ್ಬರು ವಂಚಕರು, ಅರುಣ್ ಶ್ರೀಪಾದ್ ಅವರ ಮನೆಗೆ ಬಂದು ಕಾಶಿ ಮತ್ತು ಗಂಗಾ ಸ್ನಾನದ ಮಹತ್ವದ ಬಗ್ಗೆ ಮನವರಿಕೆ ಮಾಡಿದ್ದಾರೆ.
ಧಾರ್ಮಿಕ ಚರ್ಚೆಗಳಲ್ಲಿ ತೊಡಗಿಸಿಕೊಂಡು, ಅವರ ನಂಬಿಕೆಯನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ, ಆಶೀರ್ವಾದ ಮಾಡುವ ನೆಪದಲ್ಲಿ ಅರುಣ್ ಶ್ರೀಪಾದ್ ಅವರ ಕೈಲಿದ್ದ ಉಂಗುರವನ್ನು ಎಗರಿಸಿ ಕ್ಷಣ ಮಾತ್ರದಲ್ಲಿ ಕಣ್ಮರೆಯಾಗಿದ್ದಾರೆ.
ವಂಚಕರು ಪರಾರಿಯಾದ ನಂತರವೂ, ಅರುಣ್ ಶ್ರೀಪಾದ್ಗೆ ತಮ್ಮ ಉಂಗುರ ಕಳುವಾಗಿರುವ ಬಗ್ಗೆ ತಕ್ಷಣವೇ ಅರಿವಾಗಿಲ್ಲ. ಕೆಲ ಸಮಯದ ಬಳಿಕ ಕೈಲಿದ್ದ ಉಂಗುರ ನಾಪತ್ತೆಯಾಗಿರುವುದು ಅರಿವಿಗೆ ಬಂದಿದೆ. ನಕಲಿ ನಾಗಾಸಾಧುಗಳ ಓಡಾಡ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ, ವಂಚನೆಗೊಳಗಾದ ಅರುಣ್, ವಿಜಯನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.