ತಮಿಳುನಾಡಿನ ಮುಖ್ಯಮಂತ್ರಿಯಾಗಿ ಸಕ್ರಿಯ ರಾಜಕಾರಣದಲ್ಲಿ ಬ್ಯುಸಿಯಾಗಿರುವ ನಟ ದಳಪತಿ ವಿಜಯ್ ಅವರ ಜನ್ಮದಿನದ ಅಂಗವಾಗಿ ಇಂದು ಅವರ ಬಹುನಿರೀಕ್ಷಿತ ಚಿತ್ರ ಜನ ನಾಯಕನ್ ಸಿನಿಮಾದ ಬಿಡುಗಡೆ ದಿನಾಂಕ ಪ್ರಕಟವಾಗಲಿದೆಯೇ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ. ವಿಜಯ್ ಅವರನ್ನು ಕೊನೆಯ ಬಾರಿಗೆ ಬೆಳ್ಳಿತೆರೆಯ ಮೇಲೆ ನೋಡಲು ಕಾತರರಾಗಿರುವ ಅಭಿಮಾನಿ ಬಳಗಕ್ಕೆ ಈ ದಿನದ ಮೇಲೆ ಭಾರಿ ನಿರೀಕ್ಷೆಗಳಿವೆ.
ಕೆವಿಎನ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ದೀರ್ಘಕಾಲದಿಂದ ಯಾವುದೇ ಪ್ರಮುಖ ಅಪ್‌ಡೇಟ್ ಇಲ್ಲದೆ ಸುದ್ದಿಯಿಂದ ಕೊಂಚ ದೂರವೇ ಉಳಿದಿತ್ತು. ಆದರೆ ಇಂದು ನಟನ ಹುಟ್ಟುಹಬ್ಬದ ವಿಶೇಷ ಸಂದರ್ಭವಾಗಿರುವುದರಿಂದ, ಚಿತ್ರತಂಡದಿಂದ ಕನಿಷ್ಠ ಪಕ್ಷ ಸಿನಿಮಾದ ರಿಲೀಸ್ ಡೇಟ್ ಆದರೂ ಅಧಿಕೃತವಾಗಿ ಘೋಷಣೆಯಾಗಬಹುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ.
ನಿರ್ಮಾಪಕರಿಂದ ಈವರೆಗೆ ಯಾವುದೇ ಅಧಿಕೃತ ಮಾಹಿತಿ ಹೊರಬೀಳದಿದ್ದರೂ, ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಅಭಿಮಾನಿಗಳ ನಿರೀಕ್ಷೆ ಮಾತ್ರ ದುಪ್ಪಟ್ಟಾಗಿದೆ. ರಾಜಕೀಯ ಹಿನ್ನೆಲೆಯುಳ್ಳ ಈ ಆ್ಯಕ್ಷನ್ ಡ್ರಾಮಾ ಸಿನಿಮಾವನ್ನು ಹೆಚ್ ವಿನೋತ್ ನಿರ್ದೇಶಿಸುತ್ತಿದ್ದು, ಅನಿರುದ್ಧ್ ರವಿಚಂದರ್ ಅವರ ಸಂಗೀತ ನಿರ್ದೇಶನವಿದೆ. ಚಿತ್ರದಲ್ಲಿ ಪೂಜಾ ಹೆಗ್ಡೆ, ಮಮಿತಾ ಬೈಜು ಹಾಗೂ ಬಾಬಿ ಡಿಯೋಲ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.