ಬೆಂಗಳೂರು: ಮೈಸೂರು ಮತ್ತು ಪಂಢರಪುರ ನಡುವೆ ಸಂಚರಿಸುವ ಉತ್ತರ ಕರ್ನಾಟಕ ಭಾಗದ ಅತ್ಯಂತ ಜನಪ್ರಿಯ ಗೋಲ್ ಗುಂಬಜ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 16535/36) ರೈಲಿನ ಮಾರ್ಗ ಮತ್ತು ನಿಲ್ದಾಣಗಳಲ್ಲಿ ರೈಲ್ವೆ ಮಂಡಳಿಯು ಮಹತ್ವದ ಬದಲಾವಣೆಗಳನ್ನು ಮಾಡಿದೆ. ಈ ಕುರಿತು ರೈಲ್ವೆ ಸಚಿವಾಲಯವು ಅಧಿಕೃತ ಆದೇಶ ಹೊರಡಿಸಿದೆ.
ಪ್ರಯಾಣಿಕರ ಸಮಯ ಉಳಿಸುವ ನಿಟ್ಟಿನಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಈ ರೈಲು ಇನ್ನು ಮುಂದೆ ಹುಬ್ಬಳ್ಳಿ ಮತ್ತು ಗದಗ ನಗರದ ಮುಖ್ಯ ರೈಲ್ವೆ ನಿಲ್ದಾಣಗಳಿಗೆ ಹೋಗುವ ಬದಲು, ಬೈಪಾಸ್ ಮಾರ್ಗದ ಮೂಲಕ ನೇರವಾಗಿ ಸಂಚರಿಸಲಿದೆ. ಇದರಿಂದಾಗಿ ಪ್ರಯಾಣದ ಸಮಯದಲ್ಲಿ ಭಾರಿ ಉಳಿತಾಯವಾಗಲಿದೆ.
ಹುಬ್ಬಳ್ಳಿ, ಗದಗ ನಿಲ್ದಾಣಗಳ ಬದಲಾಗಿ 2 ಹೊಸ ಸ್ಟಾಪ್ಸ್
ಹುಬ್ಬಳ್ಳಿ ಮತ್ತು ಗದಗ ಮುಖ್ಯ ನಿಲ್ದಾಣಗಳ ಬದಲಾಗಿ, ಗೋಲ್ ಗುಂಬಜ್ ಎಕ್ಸ್‌ಪ್ರೆಸ್ ರೈಲು ಈಗ ಹುಬ್ಬಳ್ಳಿ ದಕ್ಷಿಣ ಮತ್ತು ಗದಗ ಬೈಪಾಸ್ ನಿಲ್ದಾಣಗಳಲ್ಲಿ ಮಾತ್ರ ನಿಲ್ಲಲಿದೆ. ಮಾರ್ಗ ಬದಲಾವಣೆಯಿಂದಾಗಿ ರೈಲಿನ ಆಗಮನ ಮತ್ತು ನಿರ್ಗಮನದ ವೇಳಾಪಟ್ಟಿಯಲ್ಲೂ ಬದಲಾವಣೆಗಳಾಗಿವೆ:
ನೂತನ ಆಗಮನ-ನಿರ್ಗಮನ ಸಮಯ ಇಲ್ಲಿದೆ (New Train Timings):
ರೈಲು ಸಂಖ್ಯೆ 16535 (ಮೈಸೂರು – ಪಂಢರಪುರ): ಇನ್ನು ಮುಂದೆ ಮೈಸೂರಿನಿಂದ ಮಧ್ಯಾಹ್ನ 3:50 ಕ್ಕೆ ಹೊರಡಲಿದೆ (ಹಿಂದಿನ ಸಮಯ 3:45 ಆಗಿತ್ತು). ಪಂಢರಪುರಕ್ಕೆ ಮರುದಿನ ಬೆಳಿಗ್ಗೆ 11:30 ಕ್ಕೆ ತಲುಪಲಿದೆ (ಹಿಂದಿನ ಸಮಯ 12:25 ಆಗಿತ್ತು). ಅಂದರೆ ಸುಮಾರು 50 ನಿಮಿಷ ಸಮಯ ಉಳಿತಾಯವಾಗಲಿದೆ!
ರೈಲು ಸಂಖ್ಯೆ 16536 (ಪಂಢರಪುರ – ಮೈಸೂರು): ಪಂಢರಪುರದಿಂದ ಮಧ್ಯಾಹ್ನ 1:15 ಕ್ಕೆ ಹೊರಡಲಿದೆ (ಹಿಂದಿನ ಸಮಯ 1:00 ಆಗಿತ್ತು). ಮೈಸೂರಿಗೆ ಮರುದಿನ ಬೆಳಿಗ್ಗೆ 10:05 ಕ್ಕೆ ತಲುಪಲಿದೆ (ಹಿಂದಿನ ಸಮಯ 10:45 ಆಗಿತ್ತು).
ಈ ಹೊಸ ನಿಯಮ ಜಾರಿಗೆ ಬರುವುದು ಯಾವಾಗ?
ಈ ನೂತನ ಮಾರ್ಗ ಮತ್ತು ವೇಳಾಪಟ್ಟಿಯು ಮುಂಗಡ ಕಾಯ್ದಿರಿಸುವಿಕೆ ಅವಧಿ (Advance Reservation Period) ಮುಗಿದ ನಂತರ (ಕೆಲ ದಿನಗಳ ಬಳಿಕ) ಅಧಿಕೃತವಾಗಿ ಜಾರಿಗೆ ಬರಲಿದೆ ಎಂದು ರೈಲ್ವೆ ಮಂಡಳಿಯ ನಿರ್ದೇಶಕ (ಕೋಚಿಂಗ್) ಸಂಜಯ್ ಆರ್. ನೀಲಂ ತಿಳಿಸಿದ್ದಾರೆ.
ಹುಬ್ಬಳ್ಳಿ ಮತ್ತು ಗದಗ ಮುಖ್ಯ ನಿಲ್ದಾಣಗಳಿಂದ ಈ ರೈಲನ್ನು ಅವಲಂಬಿಸಿದ್ದ ಪ್ರಯಾಣಿಕರು ಇನ್ನು ಮುಂದೆ ಹುಬ್ಬಳ್ಳಿ ದಕ್ಷಿಣ ಅಥವಾ ಗದಗ ಬೈಪಾಸ್ ನಿಲ್ದಾಣಗಳನ್ನು ಬಳಸಬೇಕಾಗುತ್ತದೆ. ಈ ಬದಲಾವಣೆಯ ಬಗ್ಗೆ ಸಾರ್ವಜನಿಕರಿಗೆ ವ್ಯಾಪಕ ಪ್ರಚಾರ ನೀಡುವಂತೆ ನೈಋತ್ಯ ರೈಲ್ವೆ ಮತ್ತು ಮಧ್ಯ ರೈಲ್ವೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟ್ವೀಟ್ ವಿವರ:
ರೈಲಿನ ವೇಳಾಪಟ್ಟಿ ಮತ್ತು ಮಾರ್ಗ ಬದಲಾವಣೆ ಕುರಿತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. “ವಿಜಯಪುರ, ಗದಗ ಬೈಪಾಸ್ ಹಾಗೂ ಹುಬ್ಬಳ್ಳಿ ದಕ್ಷಿಣ ಭಾಗದ ಜನರ ಬಹು ವರ್ಷಗಳ ಬೇಡಿಕೆಯ ಹಿನ್ನೆಲೆಯಲ್ಲಿ ವಿಜಯಪುರದ ಸಂಸದ ರಮೇಶ್ ಜಿಗಜಿಣಗಿ ಮತ್ತು ಬಾಗಲಕೋಟೆ ಸಂಸದ ಪಿಸಿ ಗದ್ದಿಗೌಡರ್ ಈ ಮಾರ್ಗ ಬದಲಾವಣೆಗೆ ವಿನಂತಿಸಿದ್ದರು.
ಈ ಬೇಡಿಕೆಯನ್ನು ಪುರಸ್ಕರಿಸುವಂತೆ ನಾನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಕೋರಿದ್ದೆನು. ಈ ಮನವಿಗೆ ಸ್ಪಂದಿಸಿರುವ ರೈಲ್ವೆ ಸಚಿವಾಲಯ, ಮೈಸೂರು – ಬೆಂಗಳೂರು – ಪಂಡರಾಪುರ ಗೋಲ್ ಗುಂಬಜ್ ರೈಲನ್ನು ಗದಗ ಬೈಪಾಸ್ ಹಾಗೂ ಹುಬ್ಬಳ್ಳಿ ದಕ್ಷಿಣದ ಮೂಲಕ ಚಲಿಸಲು ಆದೇಶಿಸಿದೆ. ಇದರಿಂದ ಸಾವಿರಾರು ಜನರ ಸುಲಭ ಸಂಚಾರಕ್ಕೆ ಭಾರಿ ಅನುಕೂಲವಾಗಲಿದೆ” ಎಂದು ಜೋಶಿ ತಿಳಿಸಿದ್ದಾರೆ.