ದಾವಣಗೆರೆ: ರಾಜ್ಯದಲ್ಲಿ ಯುವಕರನ್ನು ಕಾಡುತ್ತಿರುವ ಹೃದಯಾಘಾತದ ಸರಣಿಗೆ ಮತ್ತೊಂದು ಬಲಿಯಾಗಿದೆ. ದಾವಣಗೆರೆಯ ಪ್ರತಿಭಾನ್ವಿತ ಹಾಗೂ ರಾಷ್ಟ್ರಮಟ್ಟದ ಖ್ಯಾತ ಬಾಡಿ ಬಿಲ್ಡರ್ ಸುಶೀಲ್ ಕುಮಾರ್ (26) ಅವರು ಜಿಮ್ ಮುಗಿಸಿ ಮನೆಗೆ ಮರಳಿದ ಕೆಲವೇ ಹೊತ್ತಿನಲ್ಲಿ ಹಠಾತ್ತನೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.ಅಂತರರಾಷ್ಟ್ರೀಯ ಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದ ಯುವ ಸಾಧಕನ ಅಕಾಲಿಕ ಮರಣ ಇಡೀ ಜಿಲ್ಲೆಯನ್ನು ಕಣ್ಣೀರಿಡುವಂತೆ ಮಾಡಿದೆ.
ಜಿಮ್ ಮುಗಿಸಿ ಬಂದ ಕೆಲವೇ ಕ್ಷಣಗಳಲ್ಲಿ ಕುಸಿದು ಬಿದ್ದ ಸುಶೀಲ್
ದಾವಣಗೆರೆಯ ಕೆಟಿಜೆ ನಗರದ ನಿವಾಸಿಯಾದ ಸುಶೀಲ್ ಕುಮಾರ್, ಎಂದಿನಂತೆ ರಾತ್ರಿ 8:30ರ ಸುಮಾರಿಗೆ ಜಿಮ್ ಮುಗಿಸಿಕೊಂಡು ಮನೆಗೆ ಬಂದಿದ್ದರು. ಆದರೆ ಮನೆಗೆ ಬಂದ ತಕ್ಷಣ ತಲೆಸುತ್ತು ಬರುತ್ತಿದೆ ಎಂದು ಹೇಳಿ, ನೋಡನೋಡುತ್ತಿದ್ದಂತೆ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಗಾಬರಿಗೊಂಡ ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ಸಾಗಿಸಲು ಯತ್ನಿಸಿದರಾದರೂ, ಮಾರ್ಗಮಧ್ಯದಲ್ಲೇ ಅವರು ಸಾವನ್ನಪ್ಪಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ, ಲೋ ಬಿಪಿ (ಕಡಿಮೆ ರಕ್ತದೊತ್ತಡ) ಉಂಟಾಗಿ ತೀವ್ರ ಹೃದಯಾಘಾತಕ್ಕೆ ಒಳಗಾಗಿರಬಹುದು ಎಂದು ಶಂಕಿಸಲಾಗಿದೆ.
ಮೃತ ಸುಶೀಲ್ ಕುಮಾರ್ ಕೇವಲ 26 ವರ್ಷ ಪ್ರಾಯದಲ್ಲೇ ಬಾಡಿ ಬಿಲ್ಡಿಂಗ್ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿದ್ದರು. ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರಮುಖ ಬಾಡಿ ಬಿಲ್ಡಿಂಗ್ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದರು. ಕೇವಲ ತಾನು ಬೆಳೆಯುವುದಷ್ಟೇ ಅಲ್ಲದೆ, ತನ್ನೊಂದಿಗೆ ಇರುವ ಯುವಕರೂ ಸಾಧನೆ ಮಾಡಬೇಕು ಎಂಬ ಉದಾತ್ತ ಗುಣ ಹೊಂದಿದ್ದ ಸುಶೀಲ್, ನಿತ್ಯ ಹತ್ತಾರು ಯುವಕರಿಗೆ ಉಚಿತವಾಗಿ ಜಿಮ್ ತರಬೇತಿ ನೀಡುತ್ತಿದ್ದರು. ಮುಂದಿನ ದಿನಗಳಲ್ಲಿ ಅಂತರರಾಷ್ಟ್ರೀಯ ಮಟ್ಟದ ಕಾಂಪಿಟೇಷನ್‌ಗೆ ರೆಡಿಯಾಗುತ್ತಿದ್ದ ಸುಶೀಲ್ ಕನಸು ಈಗ ವಿಧಿಯ ಆಟಕ್ಕೆ ಅರ್ಧಕ್ಕೆ ಮುರಿದುಬಿದ್ದಿದೆ.
ಮುಗಿಲು ಮುಟ್ಟಿದ ಹೆತ್ತವರ ಆಕ್ರಂದನ
ಸಾಧನೆಯ ಶಿಖರ ಏರಬೇಕಾಗಿದ್ದ ಚಿಕ್ಕ ವಯಸ್ಸಿನ ಮಗನನ್ನು ಕಳೆದುಕೊಂಡ ಹೆತ್ತವರ ಮತ್ತು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇತ್ತ ನೆಚ್ಚಿನ ಗೆಳೆಯ ಹಾಗೂ ನಗುಮುಖದ ತರಬೇತುದಾರನನ್ನು ಕಳೆದುಕೊಂಡ ದಾವಣಗೆರೆಯ ಜಿಮ್ ಯುವಕರು ಮತ್ತು ಸ್ನೇಹಿತರು ಕಣ್ಣೀರಿನ ಕಡಲಲ್ಲಿ ಮುಳುಗಿದ್ದಾರೆ.