ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ವಿದ್ಯಾರ್ಥಿಗಳಿಗೆ ಇನ್ನು ಮುಂದೆ ಪ್ರತಿ ಶನಿವಾರ ಆನ್ಲೈನ್ ತರಗತಿಗಳನ್ನು ನಡೆಸಲು ನಿರ್ಧರಿಸಿದೆ.
ದೇಶದಲ್ಲಿ ತಲೆದೋರಿರುವ ಇಂಧನ ಕೊರತೆ, ನಿತ್ಯ ಎದುರಿಸುವ ಸಂಚಾರ ದಟ್ಟಣೆ, ಮಾಲಿನ್ಯ ಸಮಸ್ಯೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ವಿಟಿಯು ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿ ನಡೆಸಲು ನಿರ್ಧರಿಸಲಾಗಿದ್ದು, ಇದರಿಂದ ವಿದ್ಯಾರ್ಥಿಗಳು ತರಗತಿಗಳಿಗಾಗಿ ಕಾಲೇಜುಗಳಿಗೆ ಆಗಮಿಸುವ ಅಗತ್ಯವಿರುವುದಿಲ್ಲ. ಮನೆಯಲ್ಲಿ ಕುಳಿತು ತಮ್ಮ ಮೊಬೈಲ್, ಲ್ಯಾಪ್ಟಾಪ್, ಡೆಸ್ಟ್ ಟಾಪ್ ಗಳಲ್ಲಿ ಆನ್ಲೈನ್ ಮೂಲಕ ತರಗತಿ ಪಾಠಗಳನ್ನು ಆಲಿಸಬಹುದಾಗಿದೆ.
ಇತ್ತೀಚೆಗೆ ವಿಟಿಯು ನಡೆಸಿದ ಕಾರ್ಯಕಾರಿ ಪರಿಷತ್ ಸಭೆಯಲ್ಲಿ ಪ್ರತಿ ಶನಿವಾರ ಆನ್ಲೈನ್ ತರಗತಿ ನಡೆಸುವ ಬಗ್ಗೆ ಎಲ್ಲಾ ಸದಸ್ಯರ ಸಹಮತದೊಂದಿಗೆ ಜಾರಿಗೆ ತರಲು ನಿರ್ಧರಿಸಲಾಗಿದೆ. ವಿಟಿಯು ವ್ಯಾಪ್ತಿಯಲ್ಲಿರುವ ಎಲ್ಲ 220 ಇಂಜಿನಿಯರಿಂಗ್ ಕಾಲೇಜುಗಳು, 2 ಲಕ್ಷ ವಿದ್ಯಾರ್ಥಿಗಳಿಗೆ ಇದು ಅನ್ವಯವಾಗಲಿದೆ.
ಸಾಮಾನ್ಯವಾಗಿ ವಿಟಿಯು ಒಂದು ಮತ್ತು ಮೂರನೇ ಶನಿವಾರವನ್ನು ಸಾರ್ವತ್ರಿಕ ರಜೆ ದಿನವಾಗಿ ಘೋಷಿಸಿದೆ. ಉಳಿದ ಎರಡು, ನಾಲ್ಕು ಮತ್ತು ಐದನೇ ಶನಿವಾರ ಎಂದನಂತೆ ತರಗತಿಗಳು ನಡೆಯುತ್ತಿದ್ದವು. ಇದೀಗ ಈ ಶನಿವಾರಗಳಂದು ಆನ್ಲೈನ್ ತರಗತಿಗಳು ನಡೆಯಲಿವೆ. ತಕ್ಷಣದಿಂದಲೇ ಇದು ಜಾರಿಗೆ ಬರಲಿದ್ದು, ಎಲ್ಲಾ ಕಾಲೇಜುಗಳ ಪ್ರಾಂಶುಪಾಲರು ಅಳವಡಿಸಿಕೊಳ್ಳಬೇಕು. ಇದಕ್ಕೆ ತಕ್ಕಂತೆ ಸಿದ್ಧತೆ ಮಾಡಿಕೊಳ್ಳುವಂತೆ ವಿಟಿಯು ತಿಳಿಸಿದೆ. ಬೋಧಕರು ಕಾಲೇಜಿಗೆ ಆಗಮಿಸಿ ಆನ್ಲೈನ್ ಕ್ಲಾಸ್ ತೆಗೆದುಕೊಳ್ಳಬೇಕಿದೆ. ವಿದ್ಯಾರ್ಥಿಗಳು ಮಾತ್ರ ಕಾಲೇಜಿಗೆ ಬರುವ ಅವಶ್ಯಕತೆ ಇರುವುದಿಲ್ಲ ಎನ್ನಲಾಗಿದೆ.