ಬೆಂಗಳೂರು: ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಕಳೆದ 13 ದಿನಗಳಿಂದ ತೀವ್ರ ಕುತೂಹಲ ಮತ್ತು ಹಗ್ಗಜಗ್ಗಾಟಕ್ಕೆ ಕಾರಣವಾಗಿದ್ದ ಹಿರಿಯ ಸಚಿವ ಕೃಷ್ಣ ಬೈರೇಗೌಡ ಅವರ ಖಾತೆ ಅಸಮಾಧಾನದ ಪರ್ವ ಕೊನೆಗೂ ಸುಖಾಂತ್ಯ ಕಂಡಿದೆ . ಬಿಡಿಎ (BDA) ಮತ್ತು ಬಿಎಂಆರ್‌ಡಿಎ (BMRDA) ಪ್ರಾಧಿಕಾರಗಳನ್ನು ಹೊರತುಪಡಿಸಿದ ಬೆಂಗಳೂರು ಅಭಿವೃದ್ಧಿ ಖಾತೆ ತಮಗೆ ಬೇಡವೇ ಬೇಡ ಎಂದು ಹಠ ಹಿಡಿದು, ಅಧಿಕಾರ ಸ್ವೀಕರಿಸದೆ ದೂರ ಉಳಿದಿದ್ದ ಕೃಷ್ಣ ಬೈರೇಗೌಡರು ಕೊನೆಗೂ ತಮ್ಮ ಪಟ್ಟು ಸಡಿಲಿಸಿದ್ದಾರೆ ಇಂದು ಬೆಳಗ್ಗೆ 10:30ಕ್ಕೆ ಜಿಬಿಎ (ಗ್ರೇಟರ್ ಬೆಂಗಳೂರು ಪ್ರಾಧಿಕಾರ) ಕಚೇರಿಯಲ್ಲಿ ಅವರು ಅಧಿಕೃತವಾಗಿ ಬೆಂಗಳೂರು ಅಭಿವೃದ್ಧಿ ಇಲಾಖೆಯ ಸಚಿವರಾಗಿ ಜವಾಬ್ದಾರಿ ವಹಿಸಿಕೊಂಡು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ
ದೆಹಲಿ ಟು ಬೆಂಗಳೂರು: ಸುರ್ಜೆವಾಲಾ ಎಂಟ್ರಿ ಮತ್ತು ಸಂಧಾನದ ಸೀಕ್ರೆಟ್ಸ್
ರಾಜ್ಯ ಸಚಿವ ಸಂಪುಟ ರಚನೆಯಾಗಿ ಖಾತೆ ಹಂಚಿಕೆಯಾದಾಗ ತಮಗೆ ಪೂರ್ಣ ಪ್ರಮಾಣದ ಅಧಿಕಾರವಿಲ್ಲದ ಖಾತೆ ನೀಡಲಾಗಿದೆ ಎಂದು ಕೃಷ್ಣ ಬೈರೇಗೌಡರು ತೀವ್ರ ಅಸಮಾಧಾನಗೊಂಡಿದ್ದರು “ಪ್ರಾಧಿಕಾರಗಳು ಇಲ್ಲದಿದ್ದರೆ ಆಡಳಿತ ಮತ್ತು ಸಮನ್ವಯತೆಗೆ ತೊಂದರೆಯಾಗುತ್ತದೆ” ಎಂದು ಹೇಳಿ ಕಳೆದ ಎರಡು ವಾರಗಳಿಂದ ಕಚೇರಿಯಿಂದ ದೂರ ಉಳಿದಿದ್ದರು, ಇದು ಸರ್ಕಾರಕ್ಕೆ ಭಾರಿ ಮುಜುಗುರ ತಂದಿತ್ತು
ದೆಹಲಿ ಮಟ್ಟದಲ್ಲಿ ಮಾತುಕತೆ: ಅಸಮಾಧಾನಗೊಂಡಿದ್ದ ಕೃಷ್ಣ ಬೈರೇಗೌಡರು ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ತಮ್ಮ ನಿಲುವನ್ನು ವಿವರಿಸಿದ್ದರು ಅಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಜೊತೆಗೂ ಸುದೀರ್ಘ ಚರ್ಚೆ ನಡೆಸಿದ್ದರೂ ಗೊಂದಲ ಬಗೆಹರಿದಿರಲಿಲ್ಲ
ಕೊನೆಗೆ ಈ ಬಿಕ್ಕಟ್ಟು ಶಮನಗೊಳಿಸಲು ಎಐಸಿಸಿ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ನಿನ್ನೆ ರಾತ್ರಿ ಸಚಿವರ ಜೊತೆ ಸುದೀರ್ಘ ಆಂತರಿಕ ಸಭೆ ನಡೆಸಿ, ಪಕ್ಷದ ಹಿತದೃಷ್ಟಿ ಹಾಗೂ ಮುಂಬರುವ ಸವಾಲುಗಳನ್ನು ಮನವರಿಕೆ ಮಾಡಿಕೊಟ್ಟು ಕೊನೆಗೂ ಕೃಷ್ಣ ಬೈರೇಗೌಡರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ
ಜವಾಬ್ದಾರಿ ವಹಿಸಿಕೊಂಡ ತಕ್ಷಣವೇ ಅಧಿಕಾರಿಗಳಿಗೆ ಸಚಿವರ ಖಡಕ್ ವಾರ್ನಿಂಗ್
ಹೈಕಮಾಂಡ್ ಸಂಧಾನ ಯಶಸ್ವಿಯಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಸಚಿವ ಕೃಷ್ಣ ಬೈರೇಗೌಡರು, ಇಂದು ಬೆಳಗ್ಗೆ ಜಿಬಿಎ ಕಚೇರಿಗೆ ಭೇಟಿ ನೀಡಿ ಅಧಿಕಾರ ವಹಿಸಿಕೊಂಡರು ತಡಮಾಡದೆ ಐದು ಮಹಾನಗರ ಪಾಲಿಕೆಗಳ ಆಯುಕ್ತರು, ಹಿರಿಯ ಅಧಿಕಾರಿಗಳು, ನಮ್ಮ ಮೆಟ್ರೋ ಹಾಗೂ ಬಿಡಬ್ಲ್ಯೂಎಸ್ಎಸ್ಬಿ (BWSSB) ಅಧಿಕಾರಿಗಳ ಜೊತೆ ಮೊದಲ ಉನ್ನತ ಮಟ್ಟದ ಅಧಿಕೃತ ಸಭೆ ನಡೆಸಿದ್ದಾರೆ ಮುಂಬರುವ ದಿನಗಳಲ್ಲಿ ನಗರದ ಆಡಳಿತ ಸುಧಾರಣೆಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಕೆಲವೊಂದು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ ಎನ್ನಲಾಗಿದೆ
ಹೊಸ ಸಚಿವರ ಮುಂದಿರುವ ಅಸಲಿ ಸವಾಲುಗಳೇನು?
ಕಳೆದ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಕಂದಾಯ ಸಚಿವರಾಗಿದ್ದ ಕೃಷ್ಣ ಬೈರೇಗೌಡರು ಕಂದಾಯ ಇಲಾಖೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತಂದು ಸಮರ್ಥ ಅಧಿಕಾರಿ ಎಂಬ ಖ್ಯಾತಿ ಗಳಿಸಿದ್ದರು ಹೀಗಾಗಿ ಈಗ ಸಿಲಿಕಾನ್ ಸಿಟಿ ಬೆಂಗಳೂರಿನ ಉಸ್ತುವಾರಿ ವಹಿಸಿಕೊಂಡಿರುವ ಅವರ ಮೇಲೆ ಜನರಿಗೆ ಹೆದರಿಕೆ ಮತ್ತು ನಿರೀಕ್ಷೆ ಎರಡೂ ಇವೆ ಸದ್ಯ ಅವರ ಮುಂದಿರುವ ಪ್ರಮುಖ ಸವಾಲುಗಳು ಇಲ್ಲಿವೆ:
ಮಳೆಗಾಲದ ಅವಾಂತರ: ಈಗಾಗಲೇ ರಾಜಧಾನಿಯಲ್ಲಿ ಮಳೆಗಾಲ ಆರಂಭವಾಗಿದ್ದು, ರಸ್ತೆಗಳು ಜಲಾವೃತಗೊಂಡು ಅವಾಂತರ ಸೃಷ್ಟಿಯಾಗುತ್ತಿವೆ. ಇದನ್ನು ತಕ್ಷಣ ನಿಯಂತ್ರಿಸಬೇಕಿದೆ.ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿರುವ ಬೆಂಗಳೂರಿನ ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕಾಗಿದೆ
ಮೆಟ್ರೋ ಹಾಗೂ ಸುರಂಗ ಮಾರ್ಗ: ನಮ್ಮ ಮೆಟ್ರೋ ವಿಸ್ತರಣೆಯ ವೇಗವನ್ನು ಹೆಚ್ಚಿಸುವುದು ಮತ್ತು ನಗರದಲ್ಲಿ ಉದ್ದೇಶಿತ ಸುರಂಗ ಮಾರ್ಗ (Tunnel Road) ಯೋಜನೆಗಳನ್ನು ಸಮರ್ಥವಾಗಿ ಅನುಷ್ಠಾನಗೊಳಿಸುವ ದೊಡ್ಡ ಜವಾಬ್ದಾರಿ ಇವರ ಹೆಗಲಿಗೇರಿದೆ