ಬೆಳಗಾವಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಚರ್ಚಿಸಲೆಂದು ತೆರಳುತ್ತಿದ್ದ ಎಂಇಎಸ್ ಪುಂಡರನ್ನು ಕರ್ನಾಟಕ ಪೊಲೀಸರು ಮಾರ್ಗ ಮಧ್ಯೆಯೇ ತಡೆದಿರುವ ಘಟನೆ ನಡೆದಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಮಹಾರಾಷ್ಟ್ರದ ಕೊಲ್ಹಾಪುರಕ್ಕೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಭೇಟಿ ಮಾಡಿ ಕರ್ನಾಟಕ-ಮಹಾರಾಷ್ಟ್ರ ಗಡಿ ವಿಷಯ ಮಾತನಾಡಲು ಹೋರಟ್ಟಿದ್ದ ಬೆಳಗಾವಿಯ ಎಂಇಎಸ್ ಪುಂಡರನ್ನು ಬೆಳಗಾವಿ ಪೊಲೀಸರು ಹತ್ತರಗಿ ಟೋಲ್‌ನಲ್ಲಿ ತಡೆದಿದ್ದಾರೆ.
ಮಹಾರಾಷ್ಟ್ರ ಏಕೀಕರಣ ಸಮಿತಿಯ ನಾಯಕರು ಮತ್ತು ಕಾರ್ಯಕರ್ತರ ನಿಯೋಗವು ವಿವಿಧ ವಾಹನಗಳಲ್ಲಿ ಕೊಲ್ಲಾಪುರಕ್ಕೆ ತೆರಳಿತ್ತಿದ್ದರು. ಈ ವೇಳೆ ಕರ್ನಾಟಕ ಪೊಲೀಸರು ಹತ್ತರಗಿ ಟೋಲ್ ಗೇಟ್‌ನಲ್ಲಿ ಎಂಇಎಸ್ ವಾಹನಗಳನ್ನು ತಡೆದಿದ್ದಾರೆ. ಮುಂದೆ ತೆರಳಲು ಬಿಟ್ಟಿಲ್ಲ ಎಂದು ಪೊಲೀಸರ ಹಾಗೂ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಟೋಲ್ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಳಿತು ಎಂಇಎಸ್ ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿದರು. ಇದರಿಂದ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಟ್ರಾಫಿಕ್ ಜಾಮ್ ನಿಂದ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
ಕೊಲ್ಹಾಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಭದ್ರತಾ ಕಾರಣಗಳಿಗಾಗಿ ಬೆಳಗಾವಿ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ ನಂತರ ಎಂಇಎಸ್ ನಾಯಕರನ್ನು ತಡೆಯಲಾಗಿದೆ. ಆದರೆ, ಸಮಿತಿಯ ನಾಯಕರು ಈ ಬಗ್ಗೆ ಲಿಖಿತ ಆದೇಶವನ್ನು ತೋರಿಸಲು ಒತ್ತಾಯಿಸಿದರು. ಪೊಲೀಸರು ಅದನ್ನು ನೀಡಲು ನಿರಾಕರಿಸಿದ್ದಾರೆ ಎಂದು ಆರೋಪಿಸಲಾಗಿದೆ.