ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಪವನ್ ಒಡೆಯರ್ ಅವರ ತಾಯಿ ಗೀತಾ ಒಡೆಯರ್ (73) ಅವರು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.
ಮಾಹಿತಿಯ ಪ್ರಕಾರ, ಗೀತಾ ಒಡೆಯರ್ ಅವರು ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಕಳೆದ ಎರಡು ತಿಂಗಳುಗಳಿಂದ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿನಲ್ಲಿ ಇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದಾರೆ.
ತಾಯಿಯ ಅಗಲಿಕೆ ಪವನ್ ಒಡೆಯರ್ ಹಾಗೂ ಅವರ ಕುಟುಂಬಕ್ಕೆ ತೀವ್ರ ಆಘಾತ ಉಂಟುಮಾಡಿದೆ. ಸುದ್ದಿ ತಿಳಿಯುತ್ತಿದ್ದಂತೆ ಚಿತ್ರರಂಗದ ಗಣ್ಯರು, ಸ್ನೇಹಿತರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ.ಗೂಗ್ಲಿ’, ‘ರಣ ವಿಕ್ರಮ’, ‘ನಟಸಾರ್ವಭೌಮ’ ಸೇರಿದಂತೆ ಹಲವು ಯಶಸ್ವಿ ಸಿನಿಮಾಗಳನ್ನು ನಿರ್ದೇಶಿಸಿರುವ ಪವನ್ ಒಡೆಯರ್ ಕನ್ನಡ ಚಿತ್ರರಂಗದ ಪ್ರಮುಖ ನಿರ್ದೇಶಕರಲ್ಲಿ ಒಬ್ಬರಾಗಿದ್ದಾರೆ.
ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಪವನ್ ಒಡೆಯರ್ ಅವರು 2010ರಲ್ಲಿ ಬಿಡುಗಡೆಯಾದ ಪಂಚರಂಗಿ ಚಿತ್ರದಲ್ಲಿ ನಿರ್ದೇಶಕ ಯೋಗರಾಜ್ ಭಟ್ಅವರ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುವ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು.
2012ರಲ್ಲಿ Govindaya Namaha ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ ಅವರು ಮೊದಲ ಸಿನಿಮಾದಲ್ಲೇ ಯಶಸ್ಸು ಕಂಡರು. ಈ ಚಿತ್ರಕ್ಕಾಗಿ ಅತ್ಯುತ್ತಮ ಚೊಚ್ಚಲ ನಿರ್ದೇಶಕ ಪ್ರಶಸ್ತಿಯನ್ನೂ ಪಡೆದರು. ಬಳಿಕ ಇದೇ ಚಿತ್ರವನ್ನು ತೆಲುಗಿನಲ್ಲಿ Potugadu ಹೆಸರಿನಲ್ಲಿ ರೀಮೇಕ್ ಮಾಡಿದರು.
2013ರಲ್ಲಿ ಯಶ್ ಮತ್ತು ಕೃತಿ ಖರ್ಬಂದಾ ನಟನೆಯ ಗೂಗ್ಲಿ ಚಿತ್ರವನ್ನು ನಿರ್ದೇಶಿಸಿ ಭಾರೀ ಯಶಸ್ಸು ಗಳಿಸಿದರು. ಈ ಸಿನಿಮಾ ಪವನ್ ಒಡೆಯರ್ ಅವರಿಗೆ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರು ತಂದುಕೊಟ್ಟಿತು.