ಬೆಂಗಳೂರು: ನಕಲಿ ದಾಖಲೆ ಸಲ್ಲಿಸಿ ಸಾಮಾಜಿಕ ಭದ್ರತಾ ಯೋಜನೆಯಡಿ ಸರ್ಕಾರದಿಂದ ಪಿಂಚಣಿ ಪಡೆಯುತ್ತಿದ್ದ 18.45 ಲಕ್ಷಕ್ಕೂ ಅಧಿಕ ಅನರ್ಹ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಶಾಕ್ ನೀಡಿದೆ.
ಇಂಥವರ ಪಿಂಚಣಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದ್ದು, ಸರ್ಕಾರದ ಬೊಕ್ಕಸಕ್ಕೆ ಆಗುತ್ತಿದ್ದ ನಷ್ಟ ತಪ್ಪಿಸಲಾಗಿದೆ. ಸಾಮಾಜಿಕ ಭದ್ರತಾ ಯೋಜನೆಯ ಪಿಂಚಣಿ ಪಡೆಯುತ್ತಿರುವವರ ಅನರ್ಹರನ್ನು ಪತ್ತೆ ಮಾಡಲು ಸರ್ಕಾರ ಮುಂದಾಗಿದೆ.
ರಾಜ್ಯದಲ್ಲಿ ಒಟ್ಟು 83 ಲಕ್ಷ ಮಂದಿ ವಿವಿಧ ಯೋಜನೆಗಳಡಿ ಪಿಂಚಣಿ ಪಡೆಯುತ್ತಿದ್ದು, ಇದಕ್ಕಾಗಿ ಪ್ರತಿ ತಿಂಗಳು 840 ಕೋಟಿ ರೂಪಾಯಿ ಬಳಕೆಯಾಗುತ್ತಿದೆ. ಶಂಕಾಸ್ಪದ 23.13 ಲಕ್ಷ ಫಲಾನುಭವಿಗಳ ತಪಾಸಣೆ ನಡೆಸಿದ್ದು, 20.60 ಲಕ್ಷ ಮಂದಿಯ ಭೌತಿಕ ಪರಿಶೀಲನೆ ಪೂರ್ಣವಾಗಿದೆ. ತಾತ್ಕಾಲಿಕವಾಗಿ 18,45,805 ಮಂದಿಯ ಪಿಂಚಣಿಯನ್ನು ಸ್ಥಗಿತಗೊಳಿಸಲಾಗಿದೆ. ಅವರಿಗೆ ಮತ್ತೊಮ್ಮೆ ದಾಖಲೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಸಂಬಂಧಿಸಿದ ತಾಲೂಕು ಕಚೇರಿ ತಹಶೀಲ್ದಾರರಿಗೆ ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಮತ್ತು ಮಂಜೂರಾತಿ ದಾಖಲೆ ಸಲ್ಲಿಸಬೇಕು. ಪರಿಶೀಲನೆಯ ನಂತರ ಪಿಂಚಣಿ ಮುಂದುವರಿಸಲಾಗುವುದು. ಅನರ್ಹರಾಗಿದ್ದಲ್ಲಿ ಅಂತವರನ್ನು ಯೋಜನೆಯಿಂದ ಕೈ ಬಿಡಲಾಗುವುದು ಎಂದು ಹೇಳಲಾಗಿದೆ.