ಬೆಂಗಳೂರು: ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಲ್ಲಿ ಶನಿವಾರದ ತರಗತಿಗಳನ್ನು ಬೆಳಗ್ಗೆ 8:30 ರಿಂದ ಮಧ್ಯಾಹ್ನ 12:30 ವರೆಗೆ ನಡೆಸುವಂತೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
ರಾಜ್ಯದ ಎಲ್ಲಾ ಶಾಲೆಗಳ ತರಗತಿಗಳ ಸಮಯದಲ್ಲಿ ಏಕರೂಪತೆ ತರುವ ಉದ್ದೇಶದಿಂದ ಶಿಕ್ಷಣ ಇಲಾಖೆ ನಿಯಮ ರೂಪಿಸಿ ಆದೇಶ ಹೊರಡಿಸಿದೆ. ಇದುವರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೇರೆ ಬೇರೆ ಸಮಯದಲ್ಲಿ ಶನಿವಾರದ ತರಗತಿಗಳು ನಡೆಯುತ್ತಿದ್ದವು. ಕೆಲವು ಶಾಲೆಗಳು ಬೆಳಿಗ್ಗೆ 8ರಿಂದ 12 ಗಂಟೆಯವರೆಗೆ, ಇನ್ನು ಕೆಲವು ಕಡೆ ಬೆಳಗ್ಗೆ 7:30 ರಿಂದ 11:30ರ ವರೆಗೆ, ಮತ್ತೆ ಕೆಲವು ಕಡೆ ಬೆಳಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಶಾಲೆಗಳು ನಡೆಯುತ್ತಿದ್ದವು.ಹೀಗಾಗಿ ಒಂದೇ ಸಮಯ ಪಾಲನೆಗೆ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ.
ಬೆಳಗ್ಗೆ 7 ಗಂಟೆಗೆ ತರಗತಿಗಳನ್ನು ಆರಂಭಿಸುವುದರಿಂದ ಮಕ್ಕಳ ಮಾನಸಿಕ ಮತ್ತು ದೈಹಿಕ ಸ್ಥಿತಿಗತಿ ಮೇಲೆ ಪ್ರಭಾವ ಬೀರುವ ಬಗ್ಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಶಿಕ್ಷಣ ಇಲಾಖೆಯ ಗಮನಕ್ಕೆ ತಂದಿತ್ತು. ಈ ವರ್ಷದಿಂದ ಜಾರಿಗೆ ತಂದಿರುವ ಆನ್ಲೈನ್ ಹಾಜರಾತಿ ನಿರ್ವಹಣೆ ಕೂಡ ಏಕರೂಪದ ಸಮಯ ನಿಗದಿಯಾದರೆ ಒಳ್ಳೆಯದು ಎನ್ನುವ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಎಲ್ಲಾ ಶಾಲೆಗಳು ಒಂದೇ ರೀತಿಯ ಸಮಯ ಪಾಲಿಸಲು ಸೂಚಿಸಲಾಗಿದೆ.
ಶನಿವಾರದ ತರಗತಿಗಳನ್ನು ಬೆಳಗ್ಗೆ 8.30ರಿಂದ ಮಧ್ಯಾಹ್ನ 12.30ರವರೆಗೆ ನಡೆಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸೂಚಿಸಿದೆ. ಶಿಕ್ಷಕರು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಾಜ್ಯಾದ್ಯಂತ ಪ್ರತಿ ಶನಿವಾರಕ್ಕೆ ಮಾತ್ರ ಶಾಲಾ ಸಮಯವನ್ನು ಏಕರೂಪವಾಗಿ ಬದಲಾವಣೆ ಮಾಡಲಾಗಿದ್ದು, ಕರ್ತವ್ಯ ಅಪ್ಲಿಕೇಶನ್ ನಲ್ಲಿ ಇದನ್ನು ಅಪ್ಡೇಟ್ ಮಾಡಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತ ವಿಕಾಸ್ ಕಿಶೋರ್ ಸುರಳ್ಕರ್ ತಿಳಿಸಿದ್ದಾರೆ.