ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಕೋಟ್ಯಂತರ ಜನರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯವು (Tungabhadra Dam) ಇಂದು ತನ್ನ ಇತಿಹಾಸದಲ್ಲೇ ಅತ್ಯಂತ ಅಪರೂಪದ ಹಾಗೂ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತ್ತಿದೆ. ಕಳೆದ 2024 ರ ಆಗಸ್ಟ್ ತಿಂಗಳಲ್ಲಿ ಜಲಾಶಯದ 19ನೇ ಕ್ರಸ್ಟ್ ಗೇಟ್ ಕೊಚ್ಚಿಹೋಗಿ ಸೃಷ್ಟಿಯಾಗಿದ್ದ ಇಡೀ ದಕ್ಷಿಣ ಭಾರತದ ಆತಂಕಕ್ಕೆ ಈಗ ಶಾಶ್ವತ ಪರಿಹಾರ ಸಿಕ್ಕಿದೆ.
ಜಲಸಂಪನ್ಮೂಲ ಇಲಾಖೆ ವತಿಯಿಂದ ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಸರ್ಕಾರಿ ಹೈಸ್ಕೂಲ್ ಗ್ರೌಂಡ್ ನಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಭಾರತ ಸರ್ಕಾರದ ಕೇಂದ್ರ ಜಲಶಕ್ತಿ ಸಚಿವರಾದ ಸಿ.ಆರ್. ಪಾಟೀಲ್, ಆಂಧ್ರಪ್ರದೇಶ ಮುಖ್ಯಮಂತ್ರಿಗಳಾದ ಎನ್.ಚಂದ್ರಬಾಬು ನಾಯ್ಡು, ತೆಲಂಗಾಣ ಮುಖ್ಯಮಂತ್ರಿಗಳಾದ ಎ.ರೇವಂತ್ ರೆಡ್ಡಿ, ಕರ್ನಾಟಕ ಉಪ ಮುಖ್ಯಮಂತ್ರಿಗಳಾದ ಡಾ. ಜಿ.ಪರಮೇಶ್ವರ್, ಆಂಧ್ರಪ್ರದೇಶ ಉಪ ಮುಖ್ಯಮಂತ್ರಿಗಳಾದ ಕೆ.ಪವನ್ ಕಲ್ಯಾಣ್, ತೆಲಂಗಾಣ ಉಪ ಮುಖ್ಯಮಂತ್ರಿಗಳಾದ ಮಲ್ಲು ಭಟ್ಟಿ ವಿಕ್ರಮಾರ್ಕ, ಭಾರತ ಸರ್ಕಾರದ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವರಾದ ವಿ. ಸೋಮಣ್ಣ, ಕೇಂದ್ರ ಜಲಶಕ್ತಿ ಖಾತೆ ರಾಜ್ಯ ಸಚಿವರಾದ ರಾಜ ಭೂಷಣ್ ಚೌಧರಿ, ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಗಳಾದ ಬಸವರಾಜ ಎಸ್ ಹೊರಟ್ಟಿ, ಕರ್ನಾಟಕ ಸರ್ಕಾರದ ಭಾರಿ ಮತ್ತು ಮಧ್ಯಮ ನೀರಾವರಿ ಇಲಾಖೆ ಸಚಿವರಾದ ರಾಮಲಿಂಗಾ ರೆಡ್ಡಿ, ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾವೇರಿ-ಗದಗ ಲೋಕಸಭಾ ಕ್ಷೇತ್ರ ಸಂಸದರಾದ ಬಸವರಾಜ ಬೊಮ್ಮಾಯಿ, ಆಂಧ್ರಪ್ರದೇಶದ ಜಲಸಂಪನ್ಮೂಲ ಇಲಾಖೆ ಸಚಿವರಾದ ಡಾ. ನಿಮ್ಮಲ ರಾಮನಾಯ್ಡು, ಆಂಧ್ರಪ್ರದೇಶದ ಹಣಕಾಸು, ಯೋಜನೆ, ವಾಣಿಜ್ಯ ತೆರಿಗೆ ಹಾಗೂ ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಪಯ್ಯವುಲ ಕೇಶವ್, ತೆಲಂಗಾಣದ ನೀರಾವರಿ ಇಲಾಖೆ ಹಾಗೂ ಸಿಎಡಿ ಸಚಿವರಾದ ಎನ್.ಉತ್ತಮ್ ಕುಮಾರ ರೆಡ್ಡಿ, ಸರ್ಕಾರಿ ಮುಖ್ಯ ಸಚೇತಕರು ಹಾಗೂ ಶಾಸಕರಾದ ಸಲೀಂ ಅಹಮದ್ ಅವರು ಘನ ಉಪಸ್ಥಿತಿ ವಹಿಸುವರು.
ಕೊಪ್ಪಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕೊಪ್ಪಳ ಸಂಸದರಾದ ಕೆ. ರಾಜಶೇಖರ ಹಿಟ್ನಾಳ್, ಬಾಗಲಕೋಟೆ ಸಂಸದರಾದ ಪಿ.ಸಿ. ಗದ್ದಿಗೌಡರ, ಬಳ್ಳಾರಿ ಸಂಸದರಾದ ಈ. ತುಕಾರಾಮ್, ದಾವಣಗೆರೆ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್, ರಾಯಚೂರು ಸಂಸದರಾದ ಜಿ.ಕುಮಾರ್ ನಾಯಕ್, ಬಳ್ಳಾರಿ ರಾಜ್ಯಸಭಾ ಸದಸ್ಯರಾದ ಡಾ. ಸೈಯದ್ ನಾಸಿರ್ ಹುಸೇನ್ ಹಾಗೂ ಕೊಪ್ಪಳ, ವಿಜಯನಗರ, ಬಳ್ಳಾರಿ, ರಾಯಚೂರು ಮತ್ತು ಗದಗ ಜಿಲ್ಲಾ ವ್ಯಾಪ್ತಿಯ ಎಲ್ಲಾ ವಿಧಾನಸಭೆ ಹಾಗೂ ವಿಧಾನ ಪರಿಷತ್ ಶಾಸಕರುಗಳು, ಎಲ್ಲಾ ಚುನಾಯಿತ ಜನಪ್ರತಿನಿಧಿಗಳು ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ
ಬರೋಬ್ಬರಿ ₹51 ಕೋಟಿಗೂ ಅಧಿಕ ವೆಚ್ಚದಲ್ಲಿ ಜಲಾಶಯದ ಎಲ್ಲಾ 33 ಕ್ರಸ್ಟ್ ಗೇಟ್‌ಗಳನ್ನು (ಸ್ಪಿಲ್ ವೇ ಗೇಟ್) ಸಂಪೂರ್ಣವಾಗಿ ಬದಲಾಯಿಸಲಾಗಿದ್ದು, ಇಂದು (ಜೂನ್ 25) ಬೆಳಗ್ಗೆ 10 ಗಂಟೆಗೆ ಈ ನೂತನ ಗೇಟ್‌ಗಳ ಭವ್ಯ ಲೋಕಾರ್ಪಣೆ ಕಾರ್ಯಕ್ರಮ ನೆರವೇರಲಿದೆ. ದಶಕಗಳ ಬಳಿಕ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವರು ಒಂದೇ ವೇದಿಕೆಯಲ್ಲಿ ಒಂದಾಗುತ್ತಿರುವುದು ಈ ಕಾರ್ಯಕ್ರಮದ ಮತ್ತೊಂದು ಬಿಗ್ ಹೈಲೈಟ್
ತುಂಗಭದ್ರಾ ಜಲಾಶಯದ ನೂತನ ಗೇಟ್‌ಗಳ ಕಂಪ್ಲೀಟ್ ಡಿಟೇಲ್ಸ್ :
ಹಳೆಯ ಗೇಟ್‌ಗಳ ಇತಿಹಾಸ: ಜಲಾಶಯಕ್ಕೆ 1953 ರಲ್ಲಿ 20 ಅಡಿ ಎತ್ತರ, 60 ಅಡಿ ಅಗಲ ಹಾಗೂ 48.50 ಟನ್ ತೂಕದ ಗೇಟ್‌ಗಳನ್ನು ಅಳವಡಿಸಲಾಗಿತ್ತು. ಕಳೆದ 75 ವರ್ಷಗಳಿಂದ ನೀರನ್ನು ತಡೆದು ನಿಲ್ಲಿಸಿದ್ದ ಈ ಗೇಟ್‌ಗಳು ಸಂಪೂರ್ಣ ಸವಕಳಿಯಾಗಿದ್ದವು.
19ನೇ ಗೇಟ್ ದುರಂತ: 2024ರ ಆಗಸ್ಟ್‌ನಲ್ಲಿ ಸರಣಿ ಪ್ರವಾಹದ ವೇಳೆ 19ನೇ ಗೇಟ್ ಕೊಚ್ಚಿಹೋಗಿತ್ತು. ಆಗ ಜಲಾಶಯದ ಭದ್ರತಾ ತಂಡ ಮತ್ತು ಕೇಂದ್ರ ಜಲಶಕ್ತಿ ಆಯೋಗ ಇಡೀ ವ್ಯವಸ್ಥೆಯನ್ನು ಪರಿಶೀಲಿಸಿ, ಎಲ್ಲಾ 33 ಗೇಟ್‌ಗಳನ್ನೇ ತುರ್ತಾಗಿ ಬದಲಾಯಿಸದಿದ್ದರೆ ಇಡೀ ಡ್ಯಾಂಗೇ ಆಪತ್ತು ಬರಲಿದೆ ಎಂದು ಎಚ್ಚರಿಸಿತ್ತು.
ಯುದ್ಧೋಪಾದಿ ಕಾರ್ಯಾಚರಣೆ: ತಜ್ಞರ ಎಚ್ಚರಿಕೆಯನ್ನು ಸವಾಲಾಗಿ ಸ್ವೀಕರಿಸಿದ ಸರ್ಕಾರ, ಅತ್ಯಂತ ವೇಗವಾಗಿ ಕಾರ್ಯಾಚರಣೆ ನಡೆಸಿ ಕೇವಲ ಕೆಲವೇ ತಿಂಗಳುಗಳಲ್ಲಿ 33 ಹೊಸ ಸ್ಪಿಲ್ ವೇ ಗೇಟ್‌ಗಳನ್ನು ಯಶಸ್ವಿಯಾಗಿ ಅಳವಡಿಸಿ ಮುಗಿಸಿದೆ.
ಒಂದೇ ವೇದಿಕೆಯಲ್ಲಿ ಹೈವೋಲ್ಟೇಜ್ ನಾಯಕರ ಸಂಗಮ
ಇಂದಿನ ಭವ್ಯ ಲೋಕಾರ್ಪಣಾ ಕಾರ್ಯಕ್ರಮಕ್ಕೆ ದಕ್ಷಿಣ ಭಾರತದ ಪ್ರಮುಖ ರಾಜಕೀಯ ದಿಗ್ಗಜರು ಆಗಮಿಸುತ್ತಿದ್ದಾರೆ:
ಕರ್ನಾಟಕ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (Bengaluru ನಿಂದ ಜಿಂದಾಲ್ ಏರ್‌ಪೋರ್ಟ್ ಮೂಲಕ ಹೆಲಿಕಾಪ್ಟರ್‌ನಲ್ಲಿ ಆಗಮನ).
ಆಂಧ್ರಪ್ರದೇಶ: ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು.
ತೆಲಂಗಾಣ: ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ.
ಕೇಂದ್ರ ಸರ್ಕಾರ: ಕೇಂದ್ರ ಜಲಶಕ್ತಿ ಸಚಿವರಾದ ಸಿ.ಆರ್. ಪಾಟೀಲ್.
ಬೆಳಗ್ಗೆ 11 ಗಂಟೆಗೆ ಮುನಿರಾಬಾದ್‌ನ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಬೃಹತ್ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಬಳ್ಳಾರಿ, ಕೊಪ್ಪಳ, ರಾಯಚೂರು ಹಾಗೂ ವಿಜಯನಗರ ಜಿಲ್ಲೆಗಳ ಸುಮಾರು 20 ಸಾವಿರಕ್ಕೂ ಹೆಚ್ಚು ರೈತರು ಈ ಐತಿಹಾಸಿಕ ಕ್ಷಣವನ್ನು ಕಣ್ಣಾರೆ ವೀಕ್ಷಿಸಲು ಭಾಗವಹಿಸುತ್ತಿದ್ದಾರೆ. ಮುನಿರಾಬಾದ್ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.
ನವಲಿ ಸಮಾನಾಂತರ ಜಲಾಶಯ ಯೋಜನೆಗೆ ಮರುಜೀವ?
ಈ ಕಾರ್ಯಕ್ರಮ ಕೇವಲ ಗೇಟ್ ಲೋಕಾರ್ಪಣೆಗೆ ಸೀಮಿತವಾಗಿಲ್ಲ. ಇದರ ಬೆನ್ನಲ್ಲೇ ಮುನಿರಾಬಾದ್‌ನ ಇಂಡಿಯನ್ ರಿಸರ್ವ್ ಬೆಟಾಲಿಯನ್ (IRB) ಸಭಾಂಗಣದಲ್ಲಿ ಮೂರೂ ರಾಜ್ಯಗಳ ಮುಖ್ಯಮಂತ್ರಿಗಳ ಮಹತ್ವದ ಸಭೆ ನಡೆಯಲಿದೆ.
30 ಟಿಎಂಸಿ ಹೂಳು: ಸದ್ಯ ತುಂಗಭದ್ರಾ ಜಲಾಶಯದಲ್ಲಿ ಸುಮಾರು 30 ಟಿಎಂಸಿಯಷ್ಟು ಹೂಳು ತುಂಬಿಕೊಂಡಿದ್ದು, ನೀರಿನ ಸಂಗ್ರಹ ಸಾಮರ್ಥ್ಯ ಕುಸಿದಿದೆ.
ನವಲಿ ಜಲಾಶಯದ ಪ್ಲಾನ್: ಈ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಕನಕಗಿರಿ ತಾಲೂಕಿನ ನವಲಿ ಗ್ರಾಮದ ಸಮೀಪ ‘ನವಲಿ ಸಮಾನಾಂತರ ಜಲಾಶಯ’ ನಿರ್ಮಿಸುವ ದೊಡ್ಡ ಯೋಜನೆ ಕರ್ನಾಟಕ ಸರ್ಕಾರದ ಮುಂದಿದೆ. ಈ ಹಿಂದೆ ಆಂಧ್ರ ಮತ್ತು ತೆಲಂಗಾಣ ಸರ್ಕಾರಗಳು ಮಾತುಕತೆಗೆ ಒಲವು ತೋರಿರಲಿಲ್ಲ. ಆದರೆ ಇಂದಿನ ಸಭೆಯಲ್ಲಿ ಮೂರೂ ರಾಜ್ಯಗಳ ಸಿಎಂಗಳು ಮುಖಾಮುಖಿಯಾಗುತ್ತಿರುವುದರಿಂದ, ನವಲಿ ಜಲಾಶಯದ ಯೋಜನೆಗೆ ಅಧಿಕೃತ ಮುದ್ರೆ ಸಿಗುವ ಭರವಸೆ ಮೂಡಿದೆ