ಬೆಂಗಳೂರು: ಅಕ್ರಮವಾಗಿ ನಿರ್ಮಿಸಿದ್ದ ಬಡಾವಣೆಯ 50ಕ್ಕೂ ಅಧಿಕ ನಿವೇಶನಗಳಿಗೆ ಕಾನೂನು ಬಾಹಿರವಾಗಿ ಎ-ಖಾತಾ ಮತ್ತು ಇ- ಖಾತಾ ಮಾಡಿಕೊಟ್ಟು ನಗರ ಪಾಲಿಕೆಗೆ ಕೋಟ್ಯಂತರ ರೂ. ನಷ್ಟ ಉಂಟು ಮಾಡಿದ ಆರೋಪದ ಮೇಲೆ ಹೆರೋಹಳ್ಳಿ ಉಪ ವಿಭಾಗದ ಸಹಾಯಕ ಕಂದಾಯ ಅಧಿಕಾರಿ ಕೆ.ಎಸ್. ಮಂಜುಳಾ ಅವರನ್ನು ಜಿಬಿಎ ಅಮಾನತು ಮಾಡಿದೆ.
ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್. ರಮೇಶ್ ಈ ಕುರಿತಾಗಿ ಪಶ್ಚಿಮ ನಗರ ಪಾಲಿಕೆ ಆಯುಕ್ತರಿಗೆ ದೂರು ನೀಡಿದ್ದರು. ಸರ್ವೇ ನಂಬರ್ 56/1ರಲ್ಲಿ ಸುಮಾರು 4.26 ಎಕರೆ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಿದ ಬಡಾವಣೆಯಲ್ಲಿನ ನಿವೇಶನಗಳಿಗೆ ಅಕ್ರಮವಾಗಿ ಎ ಮತ್ತು ಇ ಖಾತಾ ಮಾಡಿ ಕೊಡಲಾಗಿತ್ತು.
ಬಿ.ಹೆಚ್. ಗಂಗಯ್ಯ ಎಂಬುವರ ಹೆಸರಿನಲ್ಲಿ ಮಾಡಿದ್ದ ಬಿಡಿ ನಿವೇಶನಗಳಿಗೆ ಕಂದಾಯ ಇಲಾಖೆಯಲ್ಲಿ ಯಾವುದೇ ಖಾತಾ ದಾಖಲಾಗಿರಲಿಲ್ಲ. ಬಿಡಿ ನಿವೇಶನಗಳನ್ನು ಗಂಗಯ್ಯ ಅವರ ಮಗಳು ತೇಜಸ್ವಿನಿ ಮತ್ತು ಪತ್ನಿ ಗಿರಿಜಾಬಾಯಿ ಎಂಬುವರಿಗೆ ಖಾತಾ ವರ್ಗಾವಣೆ ಮಾಡಿಕೊಡಲಾಗಿದೆ ಎಂದು ದೂರಿನಲ್ಲಿ ರಮೇಶ್ ಆರೋಪಿಸಿದ್ದರು.
ಈ ಕುರಿತು ತನಿಖೆ ನಡೆಸಿದಾಗ ಕಾನೂನುಬಾಹಿರವಾಗಿ ಖಾತಾ ಮಾಡಿ ಕೊಟ್ಟಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಕಂದಾಯ ಅಧಿಕಾರಿ ಮಂಜುಳಾ ಅವರನ್ನು ಅಮಾನತು ಮಾಡಿ ಇಲಾಖಾ ತೆರಿಗೆ ಆದೇಶಿಸಲಾಗಿದೆ.