ಬೆಂಗಳೂರು: ತಮಿಳುನಾಡಿಗೆ ನೀರು ಬಿಡಲು ಆಗುವುದಿಲ್ಲ ಎಂದು ಸಿಎಂ ಡಿ.ಕೆ ಶಿವಕುಮಾರ್ ಹೇಳಿದ ಮೇಲೂ ಕದ್ದುಮುಚ್ಚಿ ಕಾವೇರಿ ನೀರು ಬಿಡಲಾಗುತ್ತಿದೆ. ಅಂದಾಜು 2000 ಕ್ಯುಸೆಕ್ ನೀರು ಬಿಡ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಆರ್.ಅಶೋಕ್, ತಮಿಳುನಾಡಿನಲ್ಲಿ ಇರೋದು ಅವರ ಮೈತ್ರಿ ಸರ್ಕಾರ. ಮೈತ್ರಿ ಮೆಚ್ಚಿಸಲು ಕದ್ದು ಮುಚ್ಚಿ ನೀರು ಬಿಡುತ್ತಿದ್ದಾರೆ. ನಮ್ಮಲ್ಲಿ ನೀರು ಎಷ್ಟಿದೆ? ಯಾಕೆ ನಮಗೆ ಬಿಡಲು ಆಗುತ್ತಿಲ್ಲ ಎಂದು ರೈತರರಿಗೂ ಸರ್ಕಾರ ಮಾಹಿತಿ ಕೊಟ್ಟಿಲ್ಲ. ಸರ್ವ ಪಕ್ಷ ಸಭೆಯನ್ನೂ ಸರ್ಕಾರ ಕರೆದಿಲ್ಲ ಎಂದು ಕಿಡಿಕಾರಿದ್ದಾರೆ.
ಗೃಹಲಕ್ಷ್ಮಿ ಯೋಜನೆಯಲ್ಲಿ 225 ಕೋಟಿ ರೂ. ಹಗರಣ ನಡೆದಿದೆ ಎಂದು ಸಿಎಜಿ ವರದಿ ಹೇಳಿದೆ. ಈ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಬೇಕು. 225 ಕೋಟಿ ರೂ. ಹಣವನ್ನು ನಕಲಿ ಖಾತೆಗಳಿಗೆ ಹಾಕಲಾಗಿದೆ. ನಕಲಿ ಖಾತೆಗಳು ರದ್ದಾದ ಮೇಲೂ ಅದೇ ಖಾತೆಗಳಿಗೆ ಹಣ ಹೋಗಿದೆ. ಇದು ಅಧಿಕಾರಿಗಳ ಕರ್ಮಕಾಂಡ. ಗ್ಯಾರಂಟಿ ಜಾರಿ ಸಮಿತಿ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು.
ಇದೇ ವೇಳೆ ಧರ್ಮಸ್ಥಳಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭೇಟಿ ವಿಚಾರವಗಿ ಮಾತನಾಡಿದ ಆರ್.ಅಶೋಕ್, ಧರ್ಮಸ್ಥಳದ ವಿಚಾರ ಈಗ ಇಲ್ಲ. ಶಾಸಕರು ಅಲ್ಲಿಗೆ ಹೋಗುತ್ತಿಲ್ಲ. ಅಡ್ಡ ಮತ ಹಾಕಿದ ಶಾಸಕರು ಯಾರು ಅಂತ ಮುಂದೆ ಗೊತ್ತಾಗುತ್ತೆ. ಆ ವಿಚಾರದಲ್ಲಿ ಕ್ರಮ ಆಗಲಿದೆ. ಆದರೆ ಯಾರೂ ಧರ್ಮಸ್ಥಳಕ್ಕೆ ಹೋಗುತ್ತಿಲ್ಲ. ವಿಜಯೇಂದ್ರ ಧರ್ಮಸ್ಥಳ ಭೇಟಿ ಅವರ ವೈಯಕ್ತಿಕ ವಿಚಾರ ಎಂದರು.
ಅಡ್ಡ ಮತದಾನದಿಂದ ವಿಪಕ್ಷ ನಾಯಕ ಸ್ಥಾನ ಹಾಗೂ ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ ಆಗುತ್ತಾ ಎಂಬ ಪ್ರಶ್ನೆಗೆ, ಅದು ನಿಮ್ಮ ಭ್ರಮೆ ಅಷ್ಟೇ. ನಿಮ್ಮ ಭ್ರಮೆಗೆ ನಾನು ಉತ್ತರ ಕೊಡಲ್ಲ. ದೆಹಲಿಯಲ್ಲಿ ನಮಗಿಂತ ಹೆಚ್ಚು ಮಾಹಿತಿ ಪಡೆದಿದ್ದಾರೆ. ಈ ರೀತಿ ಮಾಡಿದವರಿಗೆ ಯಾವುದೇ ಕಾರಣಕ್ಕೂ ಸುಮ್ಮನೆ ಬಿಡಲ್ಲ. ಸಮಯ ತೆಗೆದುಕೊಂಡು ಹೈಕಮಾಂಡ್‌ನವರು ಉತ್ತರ ಕೊಡ್ತಾರೆ. ಸದಾನಂದಗೌಡರಿಗೂ ಯಾವ ಶಾಸಕರು ಎಂದು ಕೇಳಿದೆ. ಅವರು ಹೆಸರು ಹೇಳಲಿಲ್ಲ ಎಂದು ಇದೇ ವೇಳೆ ತಿಳಿಸಿದರು.