ಮಂಡ್ಯ : ಸಮಾಜದ ಸ್ವಚ್ಛತೆಗೆ ಹಗಲಿರುಳು ಶ್ರಮಿಸುವ ಪೌರಕಾರ್ಮಿಕರಿಗೆ ಹಿರಿಯ ಅಧಿಕಾರಿಯೊಬ್ಬರು ಪಾದಪೂಜೆ ನೆರವೇರಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿರುವ ಹೃದಯಸ್ಪರ್ಶಿ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದಲ್ಲಿ ನಡೆದಿದೆ. ಇಂತಹ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿದೆ.
ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಉಪವಿಭಾಗಾಧಿಕಾರಿ (KAS ಅಧಿಕಾರಿ) ಶ್ರೀನಿವಾಸ್ ಅವರು, ವೇದಿಕೆಯಲ್ಲೇ ಪೌರಕಾರ್ಮಿಕರ ಪಾದಗಳನ್ನು ತೊಳೆದು, ಪುಷ್ಪಾರ್ಚನೆ ಮಾಡಿ ವಿಶೇಷವಾಗಿ ಗೌರವಿಸಿದರು. ಬಳಿಕ ಅವರಿಗೆ ಹಾರ ಹಾಕಿ ಶುಭ ಹಾರೈಸಿದರು.
ಹಿರಿಯ ಕೆಎಎಸ್ ಅಧಿಕಾರಿಯೊಬ್ಬರು ಯಾವುದೇ ಭೇದ-ಭಾವವಿಲ್ಲದೆ ಸ್ವತಃ ನೆಲದ ಮೇಲೆ ಕುಳಿತು ಪೌರಕಾರ್ಮಿಕರ ಪಾದಪೂಜೆ ನೆರವೇರಿಸಿದ ಈ ಅಪರೂಪದ ಹಾಗೂ ಆದರ್ಶ ಕಾರ್ಯಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಸಮಾಜ ಕಟ್ಟುವ ಕಾಯಕಯೋಗಿಗಳಿಗೆ ಇಂತಹ ಗೌರವ ಸಲ್ಲಿಸುವ ಮೂಲಕ ಅಧಿಕಾರಿ ಶ್ರೀನಿವಾಸ್ ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಸ್ಥಳೀಯರು ಶ್ಲಾಘಿಸಿದ್ದಾರೆ.
ವರದಿ: ಗಿರೀಶ್ ರಾಜ್, ಮಂಡ್ಯ