ಬೆಂಗಳೂರು: ರಾಜಧಾನಿ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಪರಭಾಷಿಕ ಉದ್ಯೋಗಿಯೊಬ್ಬ ಕನ್ನಡಿಗರ ಸ್ವಾಭಿಮಾನ ಕೆಣಕುವ ರೀತಿಯಲ್ಲಿ ವರ್ತಿಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. "ನಮ್ಮಲ್ಲಿ ಕೆಲಸ ಮಾಡಬೇಕೆಂದರೆ ನೀವು ಹಿಂದಿ ಕಲಿತುಕೊಂಡು ಬರಬೇಕು, ಇಲ್ಲವಾದರೆ ಕೆಲಸ ಬಿಟ್ಟು ಜಾಗ ಖಾಲಿ ಮಾಡಿ" ಎಂದು ಕನ್ನಡಿಗ ನೌಕರರಿಗೆ ಬೆದರಿಕೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗಿದ್ದು, ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ, ಆ ವ್ಯಕ್ತಿ ಕನ್ನಡದ ನೌಕರರನ್ನು ತನ್ನ ಎದುರು ನಿಲ್ಲಿಸಿಕೊಂಡು ತೀವ್ರವಾಗಿ ಅವಮಾನಿಸಿದ್ದಾನೆ. "ನನಗೆ ಕನ್ನಡ ಬರಲ್ಲ, ನಾನು ಹಿಂದಿಯಲ್ಲೇ ಮಾತನಾಡುವುದು. ಕರ್ನಾಟಕದಲ್ಲಿದ್ದರೆ ಏನಾಯಿತು? ನನಗೆ ಯಾವುದೇ ಸಮಸ್ಯೆ ಇಲ್ಲ, ಕನ್ನಡ ಮಾತನಾಡುವವರೆಲ್ಲಾ ಕೆಲಸ ಬಿಟ್ಟು ತೊಲಗಬಹುದು. ನಮ್ಮ ಬಳಿ ಕೆಲಸವಿದೆ, ಎಲ್ಲರೂ ಗಾಡಿ ಹತ್ತಿ ಜಾಗ ಖಾಲಿ ಮಾಡಿ" ಎಂದು ಬಹಿರಂಗವಾಗಿ ದರ್ಪ ಪ್ರದರ್ಶಿಸಿದ್ದಾನೆ. 'ಕನ್ನಡದಲ್ಲಿ ಮಾತನಾಡಿ' ಎಂದು ಕೇಳಿದ ಕನ್ನಡಿಗರಿಗೆ ಆತ ಮುಖಕ್ಕೆ ಹೊಡೆದಂತೆ ಉದ್ಧಟತನದ ಮಾತುಗಳನ್ನಾಡಿದ್ದಾನೆ.
ಕರ್ನಾಟಕಕ್ಕೆ ಬಂದು, ಇಲ್ಲಿಯೇ ಅನ್ನ ತಿಂದು ಬದುಕುತ್ತಿರುವ ಪರಭಾಷಿಕರ ಸೊಕ್ಕು ದಿನದಿಂದ ದಿನಕ್ಕೆ ಮಿತಿಮೀರುತ್ತಿದೆ ಎಂದು ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತಂದಿರುವ ಈತನ ವಿರುದ್ಧ ಹಾಗೂ ಸಂಬಂಧಪಟ್ಟ ಕಂಪನಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೆಟ್ಟಿಗರು ಮತ್ತು ಕನ್ನಡಪರ ಸಂಘಟನೆಗಳು ಜಾಲತಾಣಗಳಲ್ಲಿ ಒತ್ತಾಯಿಸುತ್ತಿವೆ.
https://twitter.com/i/status/2106716905390362969