ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಭಾಗವಾಗಿ ರಾಜ್ಯಾದ್ಯಂತ ಜಾರಿಯಾಗಿದ್ದ ಒಟ್ಟು 43.81 ಲಕ್ಷ ನೋಟಿಸ್‌ಗಳ ಪೈಕಿ 34.96 ಲಕ್ಷಕ್ಕೂ ಹೆಚ್ಚು ನೋಟಿಸ್‌ಗಳನ್ನು ವಿತರಿಸಲಾಗಿದೆ ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ (ಸಿಇಒ) ಕಚೇರಿ ಶುಕ್ರವಾರ (ಸೆಪ್ಟೆಂಬರ್ 18) ತಿಳಿಸಿದೆ.
ವಿತರಿಸಲಾದ ನೋಟಿಸ್‌ಗಳಲ್ಲಿ ಶೇಕಡಾ 50 ಕ್ಕಿಂತ ಹೆಚ್ಚು, ಅಂದರೆ 17.63 ಲಕ್ಷಕ್ಕೂ ಅಧಿಕ ಪ್ರಕರಣಗಳ ವಿಚಾರಣೆ ಈಗಾಗಲೇ ಪೂರ್ಣಗೊಂಡಿದೆ. ಸೆಪ್ಟೆಂಬರ್ 11 ರ ವೇಳೆಗೆ ಶೇ. 56 ರಷ್ಟು (24.97 ಲಕ್ಷ) ನೋಟಿಸ್‌ಗಳು ಮಾತ್ರ ತಲುಪಿದ್ದು, ಕಳೆದೊಂದು ವಾರದಲ್ಲಿ ವಿತರಣಾ ಪ್ರಮಾಣದಲ್ಲಿ ಶೇ. 22 ಕ್ಕಿಂತ ಹೆಚ್ಚಿನ ಏರಿಕೆ ಕಂಡುಬಂದಿದೆ. ಅಂತೆಯೇ ವಿಚಾರಣಾ ಪ್ರಕ್ರಿಯೆಯೂ ಗಣನೀಯವಾಗಿ ವೇಗ ಪಡೆದುಕೊಂಡಿದ್ದು, ಹಿಂದಿನ ವಾರ ಶೇ. 28.18 ರಷ್ಟಿದ್ದ ವಿಚಾರಣೆ ಪ್ರಮಾಣ ಶುಕ್ರವಾರದ ವೇಳೆಗೆ ಶೇ. 50 ಕ್ಕೆ ತಲುಪಿದೆ.
ಹಾಸನ, ದಾವಣಗೆರೆ ಮತ್ತು ರಾಮನಗರ ಜಿಲ್ಲೆಗಳಲ್ಲಿ ಶೇ. 100ರಷ್ಟುನೋಟಿಸ್‌ಗಳನ್ನು ಮತದಾರರಿಗೆತಲುಪಿಸಲಾಗಿದೆ. ಬಳ್ಳಾರಿ, ಚಾಮರಾಜನಗರ, ಚಿತ್ರದುರ್ಗ, ಬಳ್ಳಾರಿ, ಕೊಪ್ಪಳ, ವಿಜಯನಗರ, ಕೊಡಗು, ಕೋಲಾರ, ಚಿಕ್ಕಬಳ್ಳಾಪುರ, ಯಾದಗಿರಿ, ದಕ್ಷಿಣ ಕನ್ನಡ, ಮಂಡ್ಯ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ಗದಗ, ಉತ್ತರ ಕನ್ನಡ, ಉಡುಪಿ, ಧಾರವಾಡ, ವಿಜಯಪುರ, ಬೀದರ್, ಹಾವೇರಿ, ವಿಜಯಪುರ ಬಾಗಲಕೋಟೆ ಮತ್ತು ಮೈಸೂರು ಜಿಲ್ಲೆಗಳಲ್ಲಿ ಶೇ.90ಕ್ಕಿಂತ ಹೆಚ್ಚಿನ ನೋಟಿಸ್ ತಲುಪಿಸಲಾಗಿದೆ. ಬಿಬಿಎಂಪಿ ಕೇಂದ್ರ, ಬೆಂಗಳೂರು ನಗರ, ಬಿಬಿಎಂಪಿ ದಕ್ಷಿಣ ಜಿಲ್ಲೆಗಳಲ್ಲಿ ಶೇ.60ಕ್ಕಿಂತ ಹೆಚ್ಚು ನೋಟಿಸ್ ವಿತರಿಸಲಾಗಿದೆ.
ಇನ್ನೊಂದೆಡೆ, ಜೂನ್ 16 ರಿಂದ ಸೆಪ್ಟೆಂಬರ್ 17 ರ ನಡುವೆ ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ಹೆಸರು ತೆಗೆದುಹಾಕಲು ಕೋರಿ ಸಿಇಒ ಕಚೇರಿಗೆ ಒಟ್ಟು 17.13 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಇವುಗಳಲ್ಲಿ ತಿದ್ದುಪಡಿಗಾಗಿ ಸಲ್ಲಿಕೆಯಾದ ‘ನಮೂನೆ-8’ ಅರ್ಜಿಗಳ ಸಂಖ್ಯೆಯೇ ಬರೋಬ್ಬರಿ 10.24 ಲಕ್ಷವಾಗಿದೆ.