ಬೆಂಗಳೂರು : ರಾಜ್ಯದಲ್ಲಿ ಹಾವು ಕಡಿತದ ಪ್ರಕರಣಗಳು ಮತ್ತು ಸಾವಿನ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವುದು ತೀವ್ರ ಕಳವಳಕಾರಿ ವಿಷಯವಾಗಿದೆ. ಕಳೆದ ಕೇವಲ 10 ತಿಂಗಳಲ್ಲಿ (ಜನವರಿಯಿಂದ ಇಲ್ಲಿವರೆಗೆ) ಬರೋಬ್ಬರಿ 16,229 ಮಂದಿಗೆ ಹಾವು ಕಡಿದಿದ್ದು, ಈ ಪೈಕಿ 191 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ 3 ವರ್ಷಗಳಲ್ಲಿ ಒಟ್ಟು 49,965 ಮಂದಿ ಹಾವು ಕಡಿತಕ್ಕೆ ಒಳಗಾಗಿದ್ದು 446 ಸಾವುಗಳು ಸಂಭವಿಸಿವೆ. ಮುಖ್ಯವಾಗಿ ಮಲೆನಾಡು, ಕರಾವಳಿ ಹಾಗೂ ಉತ್ತರ ಕರ್ನಾಟಕದ ಅರಣ್ಯಂಚಿನ ಜಿಲ್ಲೆಗಳಾದ ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಚಾಮರಾಜನಗರದಲ್ಲಿ ಈ ಪ್ರಕರಣಗಳು ಅಧಿಕವಾಗಿವೆ. ಶೇಕಡಾ 79ರಷ್ಟು ಪ್ರಕರಣಗಳಲ್ಲಿ ಕಾಲುಗಳಿಗೇ ಹಾವು ಕಡಿದಿರುವುದು ಗಮನಾರ್ಹ.
ಹಾವು ಕಡಿತದ ಒಟ್ಟು ಪ್ರಕರಣಗಳ ಸಂಖ್ಯೆಯಲ್ಲಿ ಪಶ್ಚಿಮ ಬಂಗಾಳವು ದೇಶದಲ್ಲೇ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕವು 2ನೇ ಸ್ಥಾನದಲ್ಲಿದೆ. ಆದರೆ, ಹಾವು ಕಡಿತದಿಂದ ಸಂಭವಿಸುವ ಸಾವಿನ ಸಂಖ್ಯೆಯಲ್ಲಿ ಸತತ 2 ವರ್ಷಗಳಿಂದ ಕರ್ನಾಟಕವೇ ದೇಶದಲ್ಲೇ ಅಗ್ರಸ್ಥಾನದಲ್ಲಿದೆ ಎಂಬುದು ಅತ್ಯಂತ ಆತಂಕಕಾರಿ ಸಂಗತಿಯಾಗಿದೆ. ದೇಶದ ಇತರೆ ರಾಜ್ಯಗಳಲ್ಲಿ ಹಾವು ಕಡಿತದಿಂದ ಮೃತಪಟ್ಟವರ ಸಂಖ್ಯೆ 100ರ ಗಡಿ ದಾಟಿಲ್ಲವಾದರೂ, ನಮ್ಮ ರಾಜ್ಯದಲ್ಲಿ ಈ ಸಂಖ್ಯೆ ನೂರರ ಗಡಿ ದಾಟಿ ಮುನ್ನಡೆದಿರುವುದು ಗಂಭೀರ ಚಿಂತನೆಗೆ ಹಚ್ಚಿದೆ.
ಗ್ರಾಮೀಣ ಹಾಗೂ ಗುಡ್ಡಗಾಡು ಪ್ರದೇಶದ ಜನರಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದಿರುವುದೇ ಪ್ರಮುಖ ಸಾವಿಗೆ ಕಾರಣವಾಗಿದೆ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಆರೋಗ್ಯ ಇಲಾಖೆಯು, ತಾಲೂಕು ಮತ್ತು ಜಿಲ್ಲಾಸ್ಪತ್ರೆಗಳಲ್ಲಿ ಹಾವು ಕಡಿತದ ವಿಷನಿರೋಧಕ (ಆಂಟಿ ಸ್ನೇಕ್ ವೆನಮ್) ಲಭ್ಯವಿರುವಂತೆ ಕ್ರಮ ಕೈಗೊಂಡಿದೆ. ಅಲ್ಲದೆ, ಮರಣ ಪ್ರಕರಣಗಳ ಕುರಿತು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ 'ಡೆತ್ ಆಡಿಟ್' ನಡೆಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಈ ಸಾವಿನ ಸಂಖ್ಯೆಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಮುನ್ನೆಚ್ಚರಿಕೆಗಳನ್ನು ವಹಿಸಲಾಗುತ್ತಿದೆ.