ಮಂಡ್ಯ: ತಾಲೂಕು ಕಚೇರಿಯ ಆವರಣದಲ್ಲಿರುವ ಕಸದ ತೊಟ್ಟಿಗೆ ಸಾರ್ವಜನಿಕ ದಾಖಲೆಗಳನ್ನು ಎಸೆದು ಕರ್ತವ್ಯಲೋಪ ಹಾಗೂ ಬೇಜವಾಬ್ದಾರಿತನ ತೋರಿದ ಆರೋಪದ ಹಿನ್ನೆಲೆಯಲ್ಲಿ, ನಾಗಮಂಗಲ ತಾಲೂಕು ಕಚೇರಿಯ ಅಭಿಲೇಖಾಲಯ ಶಾಖೆಯ ವಿಷಯ ನಿರ್ವಾಹಕ ಹಾಗೂ ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ಎಂ. ಅಶೋಕ್ ಕುಮಾರ್ ಅವರನ್ನು ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ್ ಅವರು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಅಲ್ಲದೆ, ಆರೋಪಿತ ನೌಕರನ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಕಸದ ತೊಟ್ಟಿಯಲ್ಲಿ ಮಹತ್ವದ ಕಂದಾಯ ದಾಖಲೆಗಳು ಪತ್ತೆ
ದಿನಾಂಕ 15.09.2026 ರಂದು ಮಧ್ಯಾಹ್ನ ಸುಮಾರು 12:30ಕ್ಕೆ ನಾಗಮಂಗಲ ತಾಲೂಕು ಕಚೇರಿ ಆವರಣದ ಕಸದ ತೊಟ್ಟಿಯಲ್ಲಿ ಅಭಿಲೇಖಾಲಯ ಶಾಖೆಯ ದಾಖಲೆಗಳು ಬಿದ್ದಿರುವುದನ್ನು ಸಾರ್ವಜನಿಕರು ಗಮನಿಸಿ ಮಾಹಿತಿ ನೀಡಿದ್ದರು. ತಹಶೀಲ್ದಾರ್ ಅವರು ಸ್ಥಳ ಪರಿಶೀಲನೆ ನಡೆಸಿದಾಗ ದಾಖಲೆಗಳು ಇರುವುದು ದೃಢಪಟ್ಟಿತ್ತು. ಈ ಬಗ್ಗೆ ಎಸ್‌ಡಿಎ ಅಶೋಕ್ ಕುಮಾರ್ ಅವರನ್ನು ವಿಚಾರಿಸಿದಾಗ, ಸೆಪ್ಟೆಂಬರ್ 13ರ ಭಾನುವಾರ ದಾಖಲೆಗಳ ಕೊಠಡಿ ಸ್ವಚ್ಛಗೊಳಿಸುವ ವೇಳೆ ಖಾಲಿ ಎಂ.ಆರ್, ಆರ್.ಆರ್ ಪ್ರತಿಗಳು ಹಾಗೂ ಅನುಪಯುಕ್ತ ಕಾಗದಗಳನ್ನು ಎಸೆಯಲಾಗಿದೆ ಎಂದು ಸಬೂಬು ಹೇಳಿದ್ದರು. ಆದರೆ, ಈ ವಿಚಾರ ತಮ್ಮ ಗಮನಕ್ಕೆ ಬಂದಿಲ್ಲ ಎಂದು ಅಭಿಲೇಖಾಲಯದ ಮೇಲ್ವಿಚಾರಕರಾದ ಗ್ರೇಡ್-2 ತಹಶೀಲ್ದಾರ್ ಎಂ. ಮಂಜುನಾಥ್ ಸ್ಪಷ್ಟಪಡಿಸಿದ್ದರು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ, ಸ್ಥಳದಲ್ಲಿದ್ದ ಹರಿದ ಕಡತಗಳು ಸೇರಿದಂತೆ ಪ್ರಮುಖ ಕಾಗದಪತ್ರಗಳನ್ನು ಎರಡು ಬಾಕ್ಸ್‌ಗಳಲ್ಲಿ ಭರ್ತಿ ಮಾಡಿ ಸೀಜ್ ಮಾಡಲಾಗಿತ್ತು.
ಪಂಚನಾಮೆ ವೇಳೆ ಬಯಲಾಯ್ತು ಅಸಲಿ ಸತ್ಯ
ಸೆಪ್ಟೆಂಬರ್ 16 ರಂದು ಉಪತಹಶೀಲ್ದಾರ್, ಮೂವರು ಕಂದಾಯ ನಿರೀಕ್ಷಕರು ಹಾಗೂ ನಾಲ್ವರು ಗ್ರಾಮ ಆಡಳಿತಾಧಿಕಾರಿಗಳನ್ನೊಳಗೊಂಡ ತಂಡವು ಪೊಲೀಸ್ ಸಿಬ್ಬಂದಿ, ಪಂಚರ ಸಮ್ಮುಖದಲ್ಲಿ ವಿಡಿಯೋಗ್ರಫಿ ಮೂಲಕ ಸೀಲ್ಡ್ ಬಾಕ್ಸ್‌ಗಳನ್ನು ತೆರೆದು ಪರಿಶೀಲನೆ (ಇನ್ವೆಂಟ್ರಿ) ನಡೆಸಿತು. ಈ ವೇಳೆ ಕೈಬರವಣಿಗೆಯ ಹಳೆಯ ಆರ್‌ಟಿಸಿಗಳು, ಚಿಂದಿಯಾದ ಕೈಬರವಣಿಗೆ ಪಹಣಿಗಳು, ಖಾಲಿ ಆರ್‌ಟಿಸಿ, ಖಾತೆ ನಮೂನೆ, ವಿವಾದಾಸ್ಪದ ಪ್ರಕರಣಗಳ ನಮೂನೆಗಳು ಹಾಗೂ ಭೂ ಅನ್ಯಕ್ರಾಂತಕ್ಕೆ (ಲ್ಯಾಂಡ್ ಕನ್ವರ್ಷನ್) ಸಂಬಂಧಿಸಿದ ಕಡತಗಳು ಪತ್ತೆಯಾಗಿದ್ದವು.
ಸರ್ಕಾರಿ ನಿಯಮಗಳ ಸ್ಪಷ್ಟ ಉಲ್ಲಂಘನೆ
ಕರ್ನಾಟಕ ಸಾರ್ವಜನಿಕ ದಾಖಲೆಗಳ ಕಾಯ್ದೆ 2010 ಹಾಗೂ ನಿಯಮಗಳು 2013 ರ ಪ್ರಕಾರ, ಹಳೆಯ ಅಥವಾ ಅನುಪಯುಕ್ತ ದಾಖಲೆಗಳನ್ನು ನಾಶಪಡಿಸಲು ನಿಯಮಾವಳಿಗಳಿವೆ. ನಿಗದಿತ ಕಾಲಮಿತಿ ಮೀರಿದ ಕಡತಗಳನ್ನು ನಮೂನೆ-6 ರಲ್ಲಿ ಪಟ್ಟಿ ಮಾಡಿ, ಮೇಲಾಧಿಕಾರಿಗಳಿಂದ ಲಿಖಿತ ಅನುಮತಿ ಪಡೆದ ನಂತರವೇ ವಿಲೇವಾರಿ ಮಾಡಬೇಕಿರುತ್ತದೆ. ಆದರೆ ಯಾವುದೇ ನಿಯಮ ಪಾಲಿಸದೆ, ಅಧಿಕಾರಿಗಳ ಅನುಮತಿಯೂ ಇಲ್ಲದೆ ಇಡೀ ಕಡತಗಳನ್ನು ಕಸದ ಬುಟ್ಟಿಗೆ ಎಸೆದಿರುವುದು ಗಂಭೀರ ಸ್ವರೂಪದ ಅಪರಾಧ ಹಾಗೂ ಕರ್ತವ್ಯಲೋಪ ಎಂದು ಜಿಲ್ಲಾಧಿಕಾರಿಗಳ ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ತಕ್ಷಣದಿಂದ ಅಮಾನತು, ಎಫ್‌ಐಆರ್ ದಾಖಲಿಸಲು ಸೂಚನೆ
ಪ್ರಕರಣ ಮಾಧ್ಯಮಗಳಲ್ಲಿ ಪ್ರಸಾರವಾಗಿ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಕಠಿಣ ಕ್ರಮ ಕೈಗೊಂಡಿರುವ ಜಿಲ್ಲಾಧಿಕಾರಿ ಡಾ. ಕುಮಾರ್, 1957ರ ಕೆಸಿಎಸ್ (ಸಿಸಿಎ) ನಿಯಮಗಳ ಅನ್ವಯ ಎಂ. ಅಶೋಕ್ ಕುಮಾರ್ ಅವರನ್ನು ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಅಮಾನತಿನಲ್ಲಿರಿಸಿದ್ದಾರೆ. ಅಮಾನತಿನ ಅವಧಿಯಲ್ಲಿ ಇವರ ಲೀನ್ ಅನ್ನು ಮಳವಳ್ಳಿ ತಾಲೂಕು ಕಚೇರಿಗೆ ವರ್ಗಾಯಿಸಲಾಗಿದ್ದು, ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಡುವಂತಿಲ್ಲ ಎಂದು ತಾಕೀತು ಮಾಡಲಾಗಿದೆ. ಜೊತೆಗೆ, ಕರ್ನಾಟಕ ರಾಜ್ಯ ಸಾರ್ವಜನಿಕ ದಾಖಲೆಗಳ ಅಧಿನಿಯಮದಡಿ ಕರ್ತವ್ಯಲೋಪವೆಸಗಿದ ನೌಕರನ ವಿರುದ್ಧ ಕ್ರಿಮಿನಲ್ ಮೊಕದ್ದಮೆ (FIR) ದಾಖಲಿಸಿ ವರದಿ ನೀಡುವಂತೆ ನಾಗಮಂಗಲ ತಹಶೀಲ್ದಾರ್‌ಗೆ ಜಿಲ್ಲಾಧಿಕಾರಿಗಳು ಸ್ಪಷ್ಟ ಆದೇಶ ನೀಡಿದ್ದಾರೆ.