ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ.
ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆಯಂತೆ ಸೆಪ್ಟೆಂಬರ್ 28ರವರೆಗೆ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಕನ್ನಡ ಜಿಲ್ಲೆ ಹಾಗೂ ಕರಾವಳಿ ಭಾಗಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಬಂಗಾಳ ಕೊಲ್ಲಿಯಲ್ಲಿನ ಆಳವಾದ ವಾಯುಭಾರ ಕುಸಿತವು ಪಶ್ಚಿಮ-ವಾಯುವ್ಯ ದಿಕ್ಕಿನಲ್ಲಿ ಚಲಿಸುತ್ತಿದ್ದು, ಉತ್ತರ ಆಂಧ್ರಪ್ರದೇಶ–ದಕ್ಷಿಣ ಒಡಿಶಾ ಕರಾವಳಿಯತ್ತ ಸಾಗಿತ್ತು. IMD ಪ್ರಕಾರ ಈ ವ್ಯವಸ್ಥೆಯು ಸೆಪ್ಟೆಂಬರ್ 23ರ ರಾತ್ರಿ ವಿಶಾಖಪಟ್ಟಣಂ ಮತ್ತು ಗೋಪಾಲಪುರ ನಡುವಿನ ಕರಾವಳಿಯನ್ನು ದಾಟುವ ಸಾಧ್ಯತೆ ಇತ್ತು.
ಉತ್ತರ ಕನ್ನಡ, ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ
ಸೆಪ್ಟೆಂಬರ್ 24ರಂದು ಉತ್ತರ ಕನ್ನಡ ಹಾಗೂ ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಈ ಭಾಗಗಳಲ್ಲಿ ಗಂಟೆಗೆ 30ರಿಂದ 40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯೂ ಇದೆ. ಉತ್ತರ ಕನ್ನಡ ಜಿಲ್ಲೆಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಯಾವ ಜಿಲ್ಲೆಗಳಲ್ಲಿ ಮಳೆ?
ಕಲಬುರಗಿ, ಯಾದಗಿರಿ, ಬೆಳಗಾವಿ ಹಾಗೂ ರಾಯಚೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಈ ವೇಳೆ ಗಂಟೆಗೆ 30ರಿಂದ 40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯೂ ಇದೆ.
ಬಾಗಲಕೋಟೆ, ಬೀದರ್, ಹಾವೇರಿ, ಧಾರವಾಡ, ಕೊಪ್ಪಳ, ವಿಜಯಪುರ ಹಾಗೂ ಗದಗ ಜಿಲ್ಲೆಗಳ ಕೆಲವೆಡೆ ಗುಡುಗು ಸಹಿತ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ.ಚಿಕ್ಕಮಗಳೂರು, ಕೊಡಗು, ಹಾಸನ ಹಾಗೂ ಶಿವಮೊಗ್ಗ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ ಮತ್ತು ಬಿರುಸಿನ ಗಾಳಿ ಬೀಸುವ ಸಾಧ್ಯತೆ ಇದೆ.
ಇನ್ನು ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ ಹಾಗೂ ತುಮಕೂರು ಜಿಲ್ಲೆಗಳ ಕೆಲವೆಡೆ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಕರಾವಳಿಯಲ್ಲಿ ಎಚ್ಚರಿಕೆ
ಬಂಗಾಳ ಕೊಲ್ಲಿಯ ಹವಾಮಾನ ವ್ಯವಸ್ಥೆಯ ಪರಿಣಾಮ ಆಂಧ್ರಪ್ರದೇಶ ಮತ್ತು ಒಡಿಶಾ ಕರಾವಳಿಯಲ್ಲಿ ಭಾರಿ ಮಳೆ ಹಾಗೂ ಬಲವಾದ ಗಾಳಿಯ ಮುನ್ಸೂಚನೆ ನೀಡಲಾಗಿತ್ತು. ಉತ್ತರ ಆಂಧ್ರಪ್ರದೇಶ–ದಕ್ಷಿಣ ಒಡಿಶಾ ಕರಾವಳಿಯಲ್ಲಿ ಗಾಳಿಯ ವೇಗ ಗಂಟೆಗೆ 75 ಕಿ.ಮೀ.ವರೆಗೆ ತಲುಪುವ ಸಾಧ್ಯತೆಯಿದೆ ಎಂದು IMD ಎಚ್ಚರಿಸಿತ್ತು.
ಹೀಗಾಗಿ ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಭಾಗದ ಜನರು ಹವಾಮಾನ ಇಲಾಖೆಯ ಮುನ್ಸೂಚನೆಗಳನ್ನು ಗಮನಿಸಿ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ.
*ಹೊರ ರಾಜ್ಯದಲ್ಲೂ ಭಾರಿ ಮಳೆ ಮುನ್ಸೂಚನೆ
ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡಿದ್ದ ತೀವ್ರ ವಾಯುಗುಂಡು ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಕಳಿಂಗಪಟ್ಟಣದ ಸಮೀಪ ತೀರ ದಾಟಿದೆ. ಇದರ ಪರಿಣಾಮವಾಗಿ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಮುಂದಿನ 48 ಗಂಟೆಗಳ ಕಾಲ ವ್ಯಾಪಕವಾಗಿ ಭಾರಿ ಮಳೆಯಿಂದ ಅತಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಹಾಗೂ ಆಂಧ್ರಪ್ರದೇಶ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (APSDMA) ಎಚ್ಚರಿಕೆ ನೀಡಿವೆ.
ಉತ್ತರ ಆಂಧ್ರದಲ್ಲಿ ಮಳೆ, ಬಿರುಗಾಳಿ ಅಬ್ಬರ
ವಾಯುಗುಂಡು ತೀರ ದಾಟಿದರೂ ಅದರ ಪರಿಣಾಮ ಸಂಪೂರ್ಣವಾಗಿ ಕಡಿಮೆಯಾಗಿಲ್ಲ. ಉತ್ತರ ಆಂಧ್ರದ ಶ್ರೀಕಾಕುಳಂ, ವಿಜಯನಗರಂ, ಪಾರ್ವತೀಪುರಂ ಮನ್ಯಂ, ವಿಶಾಖಪಟ್ಟಣಂ, ಅನಕಾಪಲ್ಲಿ ಮತ್ತು ಅಲ್ಲೂರಿ ಸೀತಾರಾಮರಾಜು ಜಿಲ್ಲೆಗಳಲ್ಲಿ ಗಂಟೆಗೆ 50ರಿಂದ 70 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುತ್ತಿದ್ದು, ಧಾರಾಕಾರ ಮಳೆಯಾಗುತ್ತಿದೆ.
ಭಾರಿ ಮಳೆಯಿಂದ ಹಳ್ಳ-ಕೊಳ್ಳಗಳು ಉಕ್ಕಿ ಹರಿಯುವ, ತಗ್ಗು ಪ್ರದೇಶಗಳು ಜಲಾವೃತವಾಗುವ ಹಾಗೂ ಹಠಾತ್ ಪ್ರವಾಹ (ಫ್ಲ್ಯಾಶ್ ಫ್ಲಡ್) ಉಂಟಾಗುವ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.
NDRF, SDRF ತಂಡಗಳು ಅಲರ್ಟ್
ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ಉತ್ತರ ಆಂಧ್ರ ಸೇರಿದಂತೆ ಸಮಸ್ಯಾತ್ಮಕ ಪ್ರದೇಶಗಳಲ್ಲಿ 5 SDRF ಹಾಗೂ 4 NDRF ತಂಡಗಳನ್ನು ನಿಯೋಜಿಸಲಾಗಿದೆ. ತುರ್ತು ಪರಿಸ್ಥಿತಿ ಎದುರಾದರೆ ತಕ್ಷಣ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲು ತಂಡಗಳನ್ನು ಸನ್ನದ್ಧವಾಗಿಡಲಾಗಿದೆ.
ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ
ಸಮುದ್ರದಲ್ಲಿ ಭಾರಿ ಅಲೆಗಳು ಎದ್ದಿದ್ದು, ತೀವ್ರ ಪ್ರಕ್ಷುಬ್ಧತೆ ಉಂಟಾಗಿದೆ. ಹೀಗಾಗಿ ಮೀನುಗಾರರು ಸಮುದ್ರಕ್ಕೆ ತೆರಳದಂತೆ ಅಧಿಕಾರಿಗಳು ಸೂಚಿಸಿದ್ದಾರೆ.ಅಲ್ಲದೆ, ಬಿರುಗಾಳಿಯ ಸಂದರ್ಭದಲ್ಲಿ ಮರಗಳು, ವಿದ್ಯುತ್ ಕಂಬಗಳು ಹಾಗೂ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಬಳಿ ನಿಲ್ಲದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ. ತುರ್ತು ಪರಿಸ್ಥಿತಿ ಹೊರತುಪಡಿಸಿ ಜನರು ಮನೆಯಿಂದ ಹೊರಬರದಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ತುರ್ತು ಸಹಾಯವಾಣಿ
ವಿಪತ್ತು ಅಥವಾ ತುರ್ತು ಪರಿಸ್ಥಿತಿಯಲ್ಲಿ ಸಹಾಯಕ್ಕಾಗಿ 112, 1070 ಹಾಗೂ 1800 425 0101 ನಿಯಂತ್ರಣ ಕೊಠಡಿ ಸಂಖ್ಯೆಗಳನ್ನು ಸಂಪರ್ಕಿಸುವಂತೆ APSDMA ಸೂಚಿಸಿದೆ.