LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹಿರಿಯೂರಿನ 'ಹೂವಿನಹೊಳೆ PHC'ಯಲ್ಲಿ ವೈದ್ಯನ ಲಂಚಾವತಾರ: ಬಡರೋಗಿಗಳಿಂದ ಸುಲಿಗೆ

ಚಿತ್ರದುರ್ಗ: ಸರ್ಕಾರಿ ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ಉಚಿತ ಹಾಗೂ ಉತ್ತಮ ಚಿಕಿತ್ಸೆ ನೀಡಬೇಕಾದ ಸರ್ಕಾರಿ ವೈದ್ಯರೊಬ್ಬರು ರೋಗಿಗಳಿಂದಲೇ ಹಣ ವಸೂಲಿಗೆ ಇಳಿದಿರುವ ಗಂಭೀರ ಆರೋಪ ಜಿಲ್ಲೆಯ ಹಿರಿಯೂರು ತಾಲೂಕಿನ ಹೂವಿನಹೊಳೆ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಕೇಳಿಬಂದಿದೆ.

ಆರೋಗ್ಯ ಕೇಂದ್ರದ ಕರ್ತವ್ಯನಿರತ ವೈದ್ಯ ಡಾ. ಚಂದ್ರಮೌಳಿ ಅವರು ಚಿಕಿತ್ಸೆಗೆ ಬರುವ ಅಮಾಯಕ ಸಾರ್ವಜನಿಕರಿಂದ ನೇರವಾಗಿ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಸ್ಥಳೀಯರು ಹಾಗೂ ರೋಗಿಗಳು ನೇರ ಆರೋಪ ಮಾಡಿದ್ದಾರೆ.

ಚಿಕಿತ್ಸೆಯ ಹೆಸರಲ್ಲಿ ಸುಲಿಗೆ: ರೋಗಿಗಳ ಅಳಲು

ಸಾಮಾನ್ಯವಾಗಿ ಉಚಿತವಾಗಿ ಸಿಗಬೇಕಾದ ಮೂಲಭೂತ ಸೇವೆಗಳಿಗೂ ಇಲ್ಲಿ ಹಣ ತೆರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆಸ್ಪತ್ರೆಗೆ ಬರುವ ರೋಗಿಗಳಿಗೆ ಇಂಜೆಕ್ಷನ್ ನೀಡಲು ಇಂತಿಷ್ಟು ಮೊತ್ತ ಹಾಗೂ ಡ್ರಿಪ್ಸ್ (ಗ್ಲುಕೋಸ್) ಹಾಕಲು ಕನಿಷ್ಠ ₹300 ನೀಡಬೇಕೆಂದು ವೈದ್ಯರು ದುಂಬಾಲು ಬೀಳುತ್ತಿದ್ದಾರೆ ಎಂದು ಚಿಕಿತ್ಸೆಗೆ ಬಂದ ರೋಗಿಗಳು ಖಚಿತಪಡಿಸಿದ್ದಾರೆ.

ಕೂಲಿ-ನಾಲಿ ಮಾಡಿ ಬದುಕು ಸಾಗಿಸುವ ಬಡ ಜನರು, ಆರೋಗ್ಯ ಸಮಸ್ಯೆ ಬಂದಾಗ ಸರ್ಕಾರಿ ಆಸ್ಪತ್ರೆಯನ್ನು ನಂಬಿ ಬಂದರೆ, ಇಲ್ಲಿನ ವೈದ್ಯರ ಧನದಾಹಕ್ಕೆ ಬಲಿಯಾಗುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಹಳೆಯ ಚಾಳಿ ಮುಂದುವರಿಕೆ

ಆರೋಪ ಎದುರಿಸುತ್ತಿರುವ ವೈದ್ಯ ಡಾ. ಚಂದ್ರಮೌಳಿ ಈ ಹಿಂದೆ ಧರ್ಮಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲೂ ಇದೇ ರೀತಿಯ ಭ್ರಷ್ಟಾಚಾರ ಹಾಗೂ ಹಣ ವಸೂಲಿ ಆರೋಪದ ಮೇಲೆ ಅಮಾನತು ಶಿಕ್ಷೆಗೆ ಒಳಗಾಗಿದ್ದರು ಎನ್ನಲಾಗಿದೆ. ನಂತರ ಇಲ್ಲಿಗೆ ವರ್ಗಾವಣೆಗೊಂಡಿದ್ದರೂ ತಮ್ಮ ಹಳೆಯ ಚಾಳಿಯನ್ನು ಮಾತ್ರ ಬಿಡದೆ, ಮತ್ತೆ ರೋಗಿಗಳ ಸುಲಿಗೆಗೆ ಕೈಹಾಕಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಸೇವೆಯಿಂದ ವಜಾಗೊಳಿಸಲು ಗ್ರಾಮಸ್ಥರ ಆಗ್ರಹ

ವೈದ್ಯೋ ನಾರಾಯಣೋ ಹರಿ ಎನ್ನುವ ಮಾತಿದೆ. ಆದರೆ ಬಡವರ ಜೀವದ ಜೊತೆ ಚೆಲ್ಲಾಟವಾಡಿ, ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಹಣ ವಸೂಲಿಗೆ ನಿಂತಿರುವ ಇಂತಹ ವೈದ್ಯರಿಂದ ಗ್ರಾಮೀಣ ಭಾಗದ ಜನರಿಗೆ ಅನ್ಯಾಯವಾಗುತ್ತಿದೆ. ಇವರನ್ನು ಕೇವಲ ಅಮಾನತು ಮಾಡಿದರೆ ಸಾಲದು, ಶಾಶ್ವತವಾಗಿ ಸೇವೆಯಿಂದಲೇ ವಜಾಗೊಳಿಸಬೇಕು ಎಂದು ಸಾರ್ವಜನಿಕರು ಬಲವಾಗಿ ಒತ್ತಾಯಿಸಿದ್ದಾರೆ.

ಈ ಕುರಿತು ಆರೋಗ್ಯ ಸಚಿವ ಯು.ಟಿ ಖಾದರ್, ಚಿತ್ರದುರ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಆರೋಗ್ಯಾಧಿಕಾರಿಗಳು, ಹಿರಿಯೂರು ತಾಲ್ಲೂಕು ಆರೋಗ್ಯ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಹೂವಿನಹೊಳೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹಿರಿಯೂರು THO ದಿಢೀರ್ ಭೇಟಿ

ಹೂವಿನಹೊಳೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯನಿರತ ವೈದ್ಯ ಡಾ. ಚಂದ್ರಮೌಳಿ ಬಡ ರೋಗಿಗಳಿಂದ ಚಿಕಿತ್ಸೆಗೆ ಹಣ ವಸೂಲಿ ಮಾಡುತ್ತಿದ್ದಾರೆ ಎನ್ನುವ ವಿಷಯವನ್ನು ನಿಮ್ಮ ಕನ್ನಡ ನ್ಯೂಸ್ ನೌ.ಕಾಂ ಹಿರಿಯೂರು ತಾಲೂಕು ಆರೋಗ್ಯಾಧಿಕಾರಿ (THO) ಡಾ. ಮಹೇಶ್ ಗಮನಕ್ಕೆ ತರಲಾಗಿತ್ತು. ಈ ಬೆನ್ನಲ್ಲೇ ಅವರು ಹೂವಿನಹೊಳೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಆಸ್ಪತ್ರೆಗೆ ಅನಿರೀಕ್ಷಿತವಾಗಿ ಆಗಮಿಸಿದ ಆರೋಗ್ಯಾಧಿಕಾರಿಗಳು, ಅಲ್ಲಿನ ದಾಖಲಾತಿಗಳನ್ನು ಪರಿಶೀಲಿಸಿ, ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳು ಹಾಗೂ ಅವರ ಸಂಬಂಧಿಕರಿಂದ ನೇರವಾಗಿ ಮಾಹಿತಿ ಪಡೆದುಕೊಂಡರು. ಇಂಜೆಕ್ಷನ್ ಮತ್ತು ಡ್ರಿಪ್ಸ್ ಹಾಕಲು ಹಣಕ್ಕೆ ಬೇಡಿಕೆ ಇಡುತ್ತಿದ್ದ ಆರೋಪಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಡಾ. ಮಹೇಶ್, ಕರ್ತವ್ಯಲೋಪವೆಸಗಿದ ಆರೋಪ ಎದುರಿಸುತ್ತಿರುವ ವೈದ್ಯ ಡಾ. ಚಂದ್ರಮೌಳಿ ಅವರನ್ನು ಸ್ಥಳದಲ್ಲೇ ತರಾಟೆಗೆ ತೆಗೆದುಕೊಂಡರು.

ಪರಿಶೀಲನೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ತಾಲೂಕು ಆರೋಗ್ಯಾಧಿಕಾರಿ ಡಾ. ಮಹೇಶ್, ಸರ್ಕಾರಿ ಆಸ್ಪತ್ರೆಗಳಲ್ಲಿ ಬಡವರಿಗೆ ಉಚಿತ ಮತ್ತು ಗುಣಮಟ್ಟದ ಚಿಕಿತ್ಸೆ ನೀಡುವುದು ಸರ್ಕಾರದ ಉದ್ದೇಶ. ಇಲ್ಲಿ ರೋಗಿಗಳಿಂದ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಖುದ್ದು ಪರಿಶೀಲನೆ ನಡೆಸಿದ್ದೇನೆ. ರೋಗಿಗಳಿಂದಲೂ ಮಾಹಿತಿ ಸಂಗ್ರಹಿಸಲಾಗಿದೆ. ಸರ್ಕಾರಿ ನಿಯಮಗಳನ್ನು ಮೀರಿ ರೋಗಿಗಳಿಂದ ಹಣ ಪಡೆಯುವುದು ಅಕ್ಷಮ್ಯ ಅಪರಾಧ. ಇನ್ಮುಂದೆ ರೋಗಿಗಳಿಂದ ಹಣ ಪಡೆಯದಂತೆ ಖಡಕ್ ಎಚ್ಚರಿಕೆ, ಸೂಚನೆ ನೀಡಿರುವುದಾಗಿ ತಿಳಿಸಿದರು.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು...

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?BREAKING: ಇನ್ಮುಂದೆ ವೃತ್ತಿಪರ ಕೋರ್ಸ್ ಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಶೇ.15ರಷ್ಟು ಮೀಸಲಾತಿ: ರಾಜ್ಯ ಸರ್ಕಾರ ಅಧಿಕೃತ ಆದೇಶGOOD NEWS: ಗೃಹಜ್ಯೋತಿ ಫಲಾನುಭವಿಗಳಿಗೆ ಗುಡ್ ನ್ಯೂಸ್: ಮಾಹಿತಿ ದಾಖಲಿಸಲು ಅವಧಿ ವಿಸ್ತರಣೆ!ಗ್ರಾಹಕರಿಗೆ ಜಿಯೋ ಭರ್ಜರಿ ಆಫರ್: 1,499 ರೂ. JioBharat ಫೋನ್ ನೊಂದಿಗೆ 6 ತಿಂಗಳ ಉಚಿತ ರೀಚಾರ್ಜ್BREAKING: ಇನ್ಮುಂದೆ ಔಷಧಿ ಬಿಲ್‌ನಲ್ಲಿ ಮೂಲ ಬೆಲೆ, MRP ವಿವರ ಕಡ್ಡಾಯ: ರಾಜ್ಯ ಸರ್ಕಾರದ ಹೊಸ ಮಾರ್ಗಸೂಚಿ!CJP ಪ್ರತಿಭಟನೆ: 3,000ಕ್ಕೂ ಹೆಚ್ಚು ಜನರ ಬಂಧನ; ದೇಶದಲ್ಲೀಗ ಅಘೋಷಿತ ತುರ್ತು ಪರಿಸ್ಥಿತಿ ಎಂದ ಸೋನಮ್ ವಾಂಗ್ ಚುಕ್