ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ದೆಹಲಿಯಲ್ಲಿ ಎರಡು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಪ್ರತಿಭಟನೆಯ ಮೊದಲ ದಿನದಿಂದಲೇ ಪಾಲ್ಗೊಳ್ಳುತ್ತಿರುವ ಸುಪ್ರೀಂ ಕೋರ್ಟ್ ವಕೀಲರು, ಪೊಲೀಸರ ವರ್ತನೆ ವಿರುದ್ಧ ಇದೀಗ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಅವರನ್ನು ಸಂಪರ್ಕಿಸಿದ್ದಾರೆ.
ಹೌದು.ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಈಗ ಸುಪ್ರೀಂ ಕೋರ್ಟ್ ಅಂಗಳಕ್ಕೂ ತಲುಪಿದೆ. ಪ್ರತಿಭಟನಾಕಾರರ ಮೇಲೆ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಹಿರಿಯ ವಕೀಲರು ಸಿಜೆಐ ಸೂರ್ಯಕಾಂತ್ ಅವರ ಗಮನಕ್ಕೆ ತಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಿಜೆಐ, ವಕೀಲರಿಗೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಹಕ್ಕಿದೆ ಎಂದು ಸ್ಪಷ್ಟಪಡಿಸಿದ್ದು, ಪ್ರಕರಣವನ್ನು ಮರುದಿನ ವಿಚಾರಣೆಗೆ ಪಟ್ಟಿ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಈ ಸಂಬಂಧ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಅವರು, ಸಿಇಸಿ ಜ್ಞಾನೇಶ್ ಕುಮಾರ್ ಮತ್ತು ಚುನಾವಣಾ ಆಯೋಗದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗೆ ಸಂಬಂಧಿಸಿದ ಅರ್ಜಿಯ ವಿಚಾರವನ್ನು ಮುಖ್ಯ ನ್ಯಾಯಮೂರ್ತಿಗಳ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ಸೂರ್ಯಕಾಂತ್, ವಕೀಲರಿಗೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಹಕ್ಕಿದೆ ಎಂದು ಸ್ಪಷ್ಟಪಡಿಸಿದರು. ಅಲ್ಲದೆ, ಸುಪ್ರೀಂ ಕೋರ್ಟ್ ಅನ್ನು ಪ್ರತಿಭಟನೆಯ ವೇದಿಕೆಯಾಗಿ ಪರಿವರ್ತಿಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
ಪೊಲೀಸರ ವಿರುದ್ಧ ವಕೀಲರ ಗಂಭೀರ ಆರೋಪ
ದೆಹಲಿಯಲ್ಲಿ ಪ್ರತಿಭಟನೆಗೆ ಸಂಬಂಧಿಸಿದಂತೆ ಜಾರಿಗೊಳಿಸಲಾಗಿದೆ ಎನ್ನಲಾದ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 163ರ ಆದೇಶಗಳು ಸಾರ್ವಜನಿಕವಾಗಿ ಲಭ್ಯವಿಲ್ಲ ಎಂದು ಹಿರಿಯ ವಕೀಲ ಶಂಕರನಾರಾಯಣನ್ ನ್ಯಾಯಮೂರ್ತಿಗಳಿಗೆ ತಿಳಿಸಿದರು. ಈ ಸೆಕ್ಷನ್‌ನ ಕಾನೂನುಬದ್ಧತೆಯನ್ನೂ ಪ್ರಶ್ನಿಸಲಾಗಿದೆ ಎಂದು ಅವರು ಹೇಳಿದರು.
ಹಿರಿಯ ವಕೀಲ ಫರಾಸತ್ ಸೇರಿದಂತೆ ಹಲವು ವಕೀಲರನ್ನು ದೆಹಲಿಯ ರಸ್ತೆಗಳಲ್ಲಿ ಪೊಲೀಸರು ಎಳೆದೊಯ್ದಿದ್ದಾರೆ. ಪೊಲೀಸರ ವರ್ತನೆ ಅನುಚಿತವಾಗಿದೆ ಎಂದು ಅವರು ಆರೋಪಿಸಿದರು.
ಪ್ರತಿಭಟನಾಕಾರರ ಮೇಲೆ ಪೊಲೀಸರು ಹಲ್ಲೆ ನಡೆಸಲು ಅವಕಾಶ ನೀಡಲಾಗುತ್ತಿದೆ ಎಂದು ದೂರಿದ ಅವರು, ನ್ಯಾಯಾಲಯವು ವಕೀಲರಿಗೆ ಸಂಯಮದಿಂದ ವರ್ತಿಸುವಂತೆ ಸೂಚಿಸಿದಂತೆ ಪೊಲೀಸರಿಗೂ ಅದೇ ರೀತಿಯ ಸೂಚನೆ ನೀಡಬೇಕು ಎಂದು ಮನವಿ ಮಾಡಿದರು.
ಮಕ್ಕಳ ತಲೆಗೆ ಹೊಡೆದಿದ್ದಾರೆ ಎಂಬ ಆರೋಪ
ಪ್ರತಿಭಟನೆಯ ವೇಳೆ ಪೊಲೀಸರಿಂದ ಹಲ್ಲೆ ನಡೆದಿದೆ ಎಂದು ಆರೋಪಿಸಿದ ಶಂಕರನಾರಾಯಣನ್, ಕೆಲವು ಪ್ರತಿಭಟನಾಕಾರರ ತಲೆಗೆ ಪೊಲೀಸರು ಹೊಡೆದಿದ್ದಾರೆ ಎಂದು ದೂರಿದರು. ಇಬ್ಬರು ವಕೀಲರನ್ನು ಬಸ್‌ಗಳಲ್ಲಿ ಬಂಧಿಸಿಡಲಾಗಿದೆ ಎಂದೂ ಆರೋಪಿಸಿದರು.
ವಕೀಲರು ಸಂಯಮದಿಂದ ವರ್ತಿಸಬೇಕು ಎಂದು ನ್ಯಾಯಾಲಯ ಸೂಚಿಸುತ್ತಿರುವಾಗ, ಪೊಲೀಸರು ಕೂಡ ಕಾನೂನಿನ ಮಿತಿಯೊಳಗೆ ನಡೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ನಾಳೆ ವಿಚಾರಣೆಗೆ ಪಟ್ಟಿ ಮಾಡುವ ಭರವಸೆ
ವಕೀಲರ ಮನವಿಗೆ ಪ್ರತಿಕ್ರಿಯಿಸಿದ ಸಿಜೆಐ ಸೂರ್ಯಕಾಂತ್, ತಕ್ಷಣಕ್ಕೆ ಈ ವಿಚಾರದಲ್ಲಿ ಯಾವುದೇ ಹೇಳಿಕೆ ನೀಡಲು ಬಯಸುವುದಿಲ್ಲ ಎಂದು ತಿಳಿಸಿದರು. ಆದರೆ, ವಕೀಲರಿಗೆ ಪ್ರತಿಭಟನೆಯಲ್ಲಿ ಭಾಗವಹಿಸುವ ಹಕ್ಕಿದೆ ಎಂಬುದನ್ನು ಪುನರುಚ್ಚರಿಸಿದರು. ಅಲ್ಲದೆ, ಈ ಪ್ರಕರಣವನ್ನು ಮರುದಿನ ವಿಚಾರಣೆಗೆ ಪಟ್ಟಿ ಮಾಡುವುದಾಗಿ ಭರವಸೆ ನೀಡಿದರು.