ಸಾಗರ: ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತ (ಮೆಸ್ಕಾಂ) ವತಿಯಿಂದ ಸಾಗರ ನಗರ ಮತ್ತು ಗ್ರಾಮೀಣ ಉಪ ವಿಭಾಗದ ವ್ಯಾಪ್ತಿಯ ಗ್ರಾಹಕರಿಗಾಗಿ ‘ಪಿ.ಎಂ ಸೂರ್ಯಘರ್ ಸೇವಾಸೇತು’ ಮಾಹಿತಿ ಶಿಬಿರವನ್ನು ಆಯೋಜಿಸಲಾಗಿದೆ.
ದಿನಾಂಕ 13.10.2026 ರಿಂದ 15.10.2026 ರ ವರೆಗೆ ಪ್ರತಿದಿನ ಬೆಳಗ್ಗೆ 10:30 ರಿಂದ ಸಾಗರ ನಗರ ಕಚೇರಿಯ ಆವರಣದಲ್ಲಿ ಈ ಶಿಬಿರವು ನಡೆಯಲಿದೆ.
ಪಿ.ಎಂ ಸೂರ್ಯಘರ್ ಯೋಜನೆಯಡಿ ಮನೆಯ ಛಾವಣಿಯ ಮೇಲೆ ಸೋಲಾರ್ ರೂಫ್ ಟಾಪ್ ಅಳವಡಿಸಿಕೊಳ್ಳಲು ಇಚ್ಛಿಸುವ ಗ್ರಾಹಕರಿಗೆ ಸಂಪೂರ್ಣ ಮಾರ್ಗದರ್ಶನ ನೀಡುವುದು ಈ ಶಿಬಿರದ ಉದ್ದೇಶವಾಗಿದೆ.
ಶಿಬಿರದಲ್ಲಿ ಸೋಲಾರ್ ರೂಫ್ ಟಾಪ್ ಮಾರಾಟಗಾರರು ಹಾಗೂ ಬ್ಯಾಂಕ್ ಪ್ರತಿನಿಧಿಗಳು ಉಪಸ್ಥಿತರಿರಲಿದ್ದು, ಯೋಜನೆಯ ಮಾಹಿತಿ, ಅರ್ಜಿ ನೋಂದಣಿ, ಸರ್ಕಾರದ ಸಹಾಯಧನ (ಸಬ್ಸಿಡಿ) ಮತ್ತು ಬ್ಯಾಂಕ್ ಸಾಲ ಸೌಲಭ್ಯದ ಕುರಿತು ಸ್ಥಳದಲ್ಲೇ ವಿವರಗಳನ್ನು ಒದಗಿಸಲಿದ್ದಾರೆ.
ಅರ್ಜಿ ಸಲ್ಲಿಸಲು ಆಸಕ್ತಿಯಿರುವ ಗ್ರಾಹಕರು ವಿದ್ಯುತ್ ಬಿಲ್, ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯ ವಿವರಗಳನ್ನು ತರಬೇಕಾಗಿರುತ್ತದೆ. ಸಾಗರ ನಗರ ಮತ್ತು ಗ್ರಾಮೀಣ ವ್ಯಾಪ್ತಿಯ ಸಾರ್ವಜನಿಕರು ಹಾಗೂ ವಿದ್ಯುತ್ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕೆಂದು ಮೆಸ್ಕಾಂ ನಗರ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು