ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ 416ನೇ ವರ್ಷದ ಐತಿಹಾಸಿಕ ನಾಡಹಬ್ಬ ದಸರಾ ಮಹೋತ್ಸವದ ಸಂಭ್ರಮ ಮನೆಮಾಡಿದೆ. ನಾಳೆ (ಗುರುವಾರ) ನವರಾತ್ರಿ ಉತ್ಸವಕ್ಕೆ ಅಧಿಕೃತ ಚಾಲನೆ ದೊರೆಯಲಿದ್ದು, ಇತ್ತ ಚಾಮುಂಡಿ ಬೆಟ್ಟ ಹಾಗೂ ಅತ್ತ ಅಂಬಾವಿಲಾಸ ಅರಮನೆ ಎರಡೂ ಕಡೆಗಳಲ್ಲಿ ಸಿದ್ಧತೆಗಳು ಅಂತಿಮ ಹಂತ ತಲುಪಿವೆ.
ಚಾಮುಂಡಿ ಬೆಟ್ಟದಲ್ಲಿ ಧಾರ್ಮಿಕ ವಿಧಿವಿಧಾನ
ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆಯ ಧಾರ್ಮಿಕ ಕೈಂಕರ್ಯಗಳು ಬಿರುಸಿನಿಂದ ಸಾಗಿವೆ. ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ಅವರ ನೇತೃತ್ವದಲ್ಲಿ ಚಾಮುಂಡೇಶ್ವರಿ ತಾಯಿಯ ಉತ್ಸವ ಮೂರ್ತಿಯ ಶುದ್ಧಿ ಕಾರ್ಯ ಸಂಪನ್ನಗೊಂಡಿದೆ. ಅರಮನೆಯಿಂದ ತರಲಾದ ಮಹಿಷಮರ್ದಿನಿ ಅಲಂಕಾರದ ಮೂರ್ತಿಗೆ ವಿಶೇಷ ಪೂಜೆ ನೆರವೇರಿದ್ದು, ನವರಾತ್ರಿಯ ಪ್ರತಿದಿನವೂ ಪ್ರಾಣಪ್ರತಿಷ್ಠಾಪನೆ ಮಾಡಿ ವಿಶೇಷ ಧಾರ್ಮಿಕ ಪೂಜೆಗಳನ್ನು ನೆರವೇರಿಸಲಾಗುತ್ತದೆ.
ಧನುರ್ ಲಗ್ನದಲ್ಲಿ ನಾಡಹಬ್ಬಕ್ಕೆ ಅಧಿಕೃತ ಚಾಲನೆ
ನಾಳೆ ಬೆಳಿಗ್ಗೆ ಚಾಮುಂಡೇಶ್ವರಿ ದೇವಾಲಯದ ಆವರಣದಲ್ಲಿ ನಿರ್ಮಿಸಲಾಗಿರುವ ಭವ್ಯ ವೇದಿಕೆಯಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಬೆಳಿಗ್ಗೆ 11:50 ರಿಂದ ಮಧ್ಯಾಹ್ನ 12:13ರ ಧನುರ್ ಲಗ್ನದ ಶುಭ ಮುಹೂರ್ತದಲ್ಲಿ ನಾಡಹಬ್ಬ ದಸರಾವನ್ನು ಕೊಪ್ಪಳದ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಚಿವರು, ಸಂಸದರು, ಶಾಸಕರು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ. ಈ ಬಾರಿ 100ಕ್ಕೂ ಹೆಚ್ಚು ವಿವಿಧ ಧರ್ಮಗುರುಗಳು ಪಾಲ್ಗೊಳ್ಳುತ್ತಿರುವುದು ವಿಶೇಷ. ವಿವಿಐಪಿ, ವಿಐಪಿ ಹಾಗೂ ಸಾರ್ವಜನಿಕರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಲಾಗಿದ್ದು, ಬೆಟ್ಟದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
ಅರಮನೆಯಲ್ಲಿ ಖಾಸಗಿ ದರ್ಬಾರ್ ಸಡಗರ
ಮೈಸೂರು ಅರಮನೆಯಲ್ಲೂ ರಾಜಪರಂಪರೆಯ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಲಿವೆ:
-
ಸಿಂಹ ಜೋಡಣೆ: ಬೆಳಿಗ್ಗೆ 6:00 ರಿಂದ 7:12ರ ಶುಭ ವೇಳೆಯಲ್ಲಿ ರತ್ನಖಚಿತ ಸಿಂಹಾಸನಕ್ಕೆ ಸಿಂಹ ಜೋಡಣೆ ಕಾರ್ಯ ನೆರವೇರಲಿದೆ.
-
ಕಂಕಣಧಾರಣೆ: ಬೆಳಿಗ್ಗೆ 8:35 ರಿಂದ 9:05ರೊಳಗೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಕಂಕಣಧಾರಣೆ ನಡೆಯಲಿದೆ.
-
ಸಿಂಹಾಸನಾರೋಹಣ: ಬೆಳಿಗ್ಗೆ 11:45 ರಿಂದ ಮಧ್ಯಾಹ್ನ 12:05ರೊಳಗೆ ಯದುವೀರ ಒಡೆಯರ್ ಸಿಂಹಾಸನಾರೋಹಣ ಮಾಡುವುದರೊಂದಿಗೆ ಸಾಂಪ್ರದಾಯಿಕ 'ಖಾಸಗಿ ದರ್ಬಾರ್'ಗೆ ಚಾಲನೆ ಸಿಗಲಿದೆ.
ವಿದ್ಯುದ್ದೀಪಗಳಿಂದ ಕಂಗೊಳಿಸುತ್ತಿರುವ ಮೈಸೂರು ನಗರಕ್ಕೆ ದೇಶ-ವಿದೇಶಗಳ ಪ್ರವಾಸಿಗರು ಲಗ್ಗೆಯಿಡುತ್ತಿದ್ದು, ಸಾಂಸ್ಕೃತಿಕ ವೈಭವ ಕಣ್ತುಂಬಿಕೊಳ್ಳಲು ಜನಸಾಗರವೇ ಸಾಕ್ಷಿಯಾಗಲಿದೆ.