ಶಿವಮೊಗ್ಗ: ಜಿಲ್ಲೆಯ ಸಾಗರದಲ್ಲಿ ಗೋಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಿರುವುದಾಗಿ ಎಎಸ್ಪಿ ಡಾ.ಬೆನಕ ಪ್ರಸಾದ್ ಮಾಹಿತಿ ನೀಡಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಡಿವೈಎಸ್ಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಇತ್ತೀಚಿನ ದಿನಗಳಲ್ಲಿ ಸಾಗರ ನಗರ ಹಾಗೂ ಗ್ರಾಮಾಂತರ ವ್ಯಾಪ್ತಿಯಲ್ಲಿ ಜಾನುವಾರುಗಳ ಕಳವು ಪ್ರಕರಣಗಳು ಹೆಚ್ಚಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದವು. ಇತ್ತೀಚೆಗೆ ನಡೆದ ಜನಸ್ಪಂದನ ಮತ್ತು ಪ್ರಜಾಸೇವಾ ಅಭಿಯಾನ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕರು ಕೂಡ ಈ ವಿಚಾರವನ್ನು ಗಂಭೀರವಾಗಿ ಪ್ರಸ್ತಾಪಿಸಿದ್ದರು.
ಸಾಗರ ಭಾಗದಲ್ಲಿ ಬೀಡಾಡಿ ಹಸುಗಳು ಮಾತ್ರವಲ್ಲದೆ, ರೈತರು ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುಗಳನ್ನೂ ಕಳವು ಮಾಡಲಾಗಿತ್ತು. ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಹೆಚ್ಚುವರಿ ಎಸ್ಪಿ ಅವರ ಮಾರ್ಗದರ್ಶನದಲ್ಲಿ, ಸಾಗರ ಟೌನ್ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಗಳಾದ ಸನಾವುಲ್ಲಾ, ಕೃಷ್ಣಮೂರ್ತಿ ಮತ್ತು ರವಿ ಅವರು ಇನ್‌ಸ್ಪೆಕ್ಟರ್ ನೇತೃತ್ವದಲ್ಲಿ ಮೂರು ಪ್ರಮುಖ ಪ್ರಕರಣಗಳನ್ನು ಭೇದಿಸಿದ್ದಾರೆ ಎಂದರು.

ದಿನಾಂಕ 10/05/2026 ರಂದು ಸಾಗರ ವಿಜಯನಗರದ ಗಜಾನನ ಎಸ್.ಎನ್ ಎಂಬುವರ ಮನೆಯಿಂದ ₹5,000 ಮೌಲ್ಯದ ಹಸು ಕಳವಾದ ಬಗ್ಗೆ ನಗರ ಠಾಣೆಯಲ್ಲಿ ಕ್ರೈಂ ನಂ. 98/26 ರಡಿ ಪ್ರಕರಣ ದಾಖಲಾಗಿತ್ತು. ಅದೇ ರೀತಿ, ದಿನಾಂಕ 25/09/2026 ರಂದು ಹೊಸೂರು ವರದಾಮೂಲ ಭಾಗದ ನಿವಾಸಿ ವನಜಾಕ್ಷಿ ಎಂಬುವರು ತಮ್ಮ ಕೊಟ್ಟಿಗೆಯಲ್ಲಿದ್ದ ಹಸು ಕಳವಾದ ಬಗ್ಗೆ ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಠಾಣೆಯಲ್ಲಿ ಕ್ರೈಂ ನಂ. 143/26 ರಡಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಮಾಹಿತಿ ಕಲೆಹಾಕಿದಾಗ ಭದ್ರಾವತಿ ಮೂಲದ ಆರೋಪಿಗಳು ಈ ಕೃತ್ಯ ಎಸಗಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಭದ್ರಾವತಿಯ ತಡಸ ನಿವಾಸಿ, ಅಡಿಕೆ ಕೊಯ್ಯುವ ಕೆಲಸ ಮಾಡುವ ಬರ್ಕತುಲ್ಲಾ ಅಲಿಯಾಸ್ ಕಾಲು (23) ಎಂಬಾತನನ್ನು ಬಂಧಿಸಲಾಗಿದೆ ಎಂದು ಹೇಳಿದರು.
ದಾಳಿ ವೇಳೆ ಪರಾರಿಯಾಗಿರುವ ಈತನ ಸ್ನೇಹಿತ ನಜುಲ ಎಂಬಾತನ ಬಂಧನಕ್ಕೆ ಪ್ರತ್ಯೇಕ ತಂಡ ರಚಿಸಲಾಗಿದೆ. ಇದಲ್ಲದೆ, ಸಾಗರ ಟೌನ್ ವ್ಯಾಪ್ತಿಯ ವಾಟರ್ ಟ್ಯಾಂಕ್ ಬಳಿ ಹಸುವಿಗೆ ಬ್ರೆಡ್ ತಿನ್ನಿಸಿ ವಾಹನಕ್ಕೆ ತುಂಬಲು ಯತ್ನಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಆ ಕೃತ್ಯದಲ್ಲೂ ಇವರೇ ಭಾಗಿಯಾಗಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಮುಂಬರುವ ಹಬ್ಬ-ಹರಿದಿನಗಳಲ್ಲಿ ಅಕ್ರಮ ಜಾನುವಾರು ಸಾಗಾಟ ತಡೆಯಲು ಚೆಕ್‌ಪೋಸ್ಟ್‌ಗಳನ್ನು ತೆರೆದು, ಹಳೆಯ ಅಪರಾಧಿಗಳ (MOB offenders) ಮೇಲೆ ತೀವ್ರ ನಿಗಾ ಇರಿಸಲಾಗುವುದು ಎಂದು ಎಎಸ್ಪಿ ಎಚ್ಚರಿಸಿದ್ದಾರೆ.
ಬೋರ್‌ವೆಲ್ ಕಾಪರ್ ವೈರ್ ಕಳ್ಳತನ: ಮೂವರ ವಶ, ಖರೀದಿದಾರರಿಗೆ ಎಚ್ಚರಿಕೆ
ಬರಗಾಲದ ವಾತಾವರಣ ಮತ್ತು ತಾಮ್ರಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಬಂದ ಹಿನ್ನೆಲೆಯಲ್ಲಿ, ಗ್ರಾಮೀಣ ಭಾಗದ ತೋಟಗಳ ಪಂಪ್‌ಸೆಟ್‌ಗಳಿಂದ ಕಾಪರ್ ವೈರ್ ಕದಿಯುವ ಪ್ರಕರಣಗಳು ವ್ಯಾಪಕವಾಗಿ ಹೆಚ್ಚಾಗಿದ್ದವು. ಇಕ್ಕೇರಿ ಭಾಗದ ಗ್ರಾಮಸ್ಥರು ಹಾಗೂ ಇಕ್ಕೇರಿ ಪಿಡಿಒ ಅವರು ಸರ್ಕಾರಿ ಬೋರ್‌ವೆಲ್‌ನಿಂದ ಕೇಬಲ್ ವೈರ್ ಕಳವಾಗಿರುವ ಬಗ್ಗೆ ದೂರು ನೀಡಿದ್ದರು. ಈ ಪ್ರಕರಣದ ಬೆನ್ನತ್ತಿದ ಪೊಲೀಸರು ಸಾಗರ ನಗರದ ಜನ್ನತ್‌ಗಲ್ಲಿ ನಿವಾಸಿಗಳಾದ ತೌಫೀಕ್, ಸಮೀರ್ ಅಲಿಯಾಸ್ ಅಡ್ಡು ಮತ್ತು ಯಾಸೀನ್ ಎಂಬ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಕದ್ದ ವೈರ್ ಅನ್ನು ಈಗಾಗಲೇ ಮಾರಾಟ ಮಾಡಿದ್ದು, ರಿಕವರಿ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.
ಇದೇ ವೇಳೆ ಕದ್ದ ಕಾಪರ್ ವೈರ್ ಖರೀದಿಸುವ ಗುಜರಿ ಮತ್ತು ಇತರೆ ಅಂಗಡಿಯವರಿಗೆ ಕಠಿಣ ಎಚ್ಚರಿಕೆ ನೀಡಿರುವ ಎಎಸ್ಪಿ, ಮುಂದಿನ ದಿನಗಳಲ್ಲಿ ಕದ್ದ ಸಾಮಗ್ರಿಗಳನ್ನು ಖರೀದಿಸುವ ಅಂಗಡಿಯವರನ್ನೂ ಎಫ್‌ಐಆರ್‌ನಲ್ಲಿ ನೇರ ಆರೋಪಿಗಳನ್ನಾಗಿ ಸೇರಿಸಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು.
ಲಾಡ್ಜ್‌ನಲ್ಲಿ ಗಾಂಜಾ ಸೇವನೆ: ನಾಲ್ವರ ವಿರುದ್ಧ ಎನ್‌ಡಿಪಿಎಸ್ ಪ್ರಕರಣ
ಸಾಗರದ ಮಾಧವ ರೆಸಿಡೆನ್ಸಿ ಲಾಡ್ಜ್‌ನಲ್ಲಿ ಮೂವರು ಯುವಕರು ಮತ್ತು ಓರ್ವ ಯುವತಿ ಅನುಮಾನಾಸ್ಪದವಾಗಿ ವರ್ತಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದಿತ್ತು. ತಕ್ಷಣ ಸಾಗರ ಟೌನ್ ಸಬ್ ಇನ್‌ಸ್ಪೆಕ್ಟರ್ ಶಾಂತರಾಜು ಅವರು ದಾಳಿ ನಡೆಸಿದಾಗ, ಆರೋಪಿಗಳು ಸ್ವಂತ ಬಳಕೆಗೆಂದು ಅಲ್ಪ ಪ್ರಮಾಣದ ಗಾಂಜಾ ಇಟ್ಟುಕೊಂಡಿರುವುದು ಪತ್ತೆಯಾಗಿದೆ ಎಂದರು.
ಆರೋಪಿಗಳ ಪೈಕಿ ಒಬ್ಬಾತ ಹೊರಗಿನಿಂದ ಗಾಂಜಾ ತಂದು ಸರಬರಾಜು ಮಾಡುವ ಪ್ರವೃತ್ತಿ ಹೊಂದಿದ್ದ. ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ (THC) ಪಾಸಿಟಿವ್ ಬಂದಿದ್ದು, ಗಾಂಜಾ ಸರಬರಾಜು ಮಾಡಿದ ವ್ಯಕ್ತಿ ಸೇರಿದಂತೆ ನಾಲ್ಕು ಪ್ಲಸ್ ಒಂದು ಒಟ್ಟು ಐದು ಜನರ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ ಎಂದರು.
ತಾಂತ್ರಿಕ ತನಿಖೆ ಹಾಗೂ ಮನೆ ಕಳವು ಪ್ರಕರಣಗಳ ಪ್ರಗತಿ
ಗ್ರಾಮಾಂತರ ವ್ಯಾಪ್ತಿಯ ಮತ್ತೊಂದು ಪ್ರಕರಣದಲ್ಲಿ ಹ್ಯೂಮನ್ ಇಂಟೆಲಿಜೆನ್ಸ್ ಕೊರತೆ ಇರುವುದರಿಂದ, ಸಿಡಿಆರ್, ಟವರ್ ಡಂಪ್ ಮತ್ತು ಐಪಿಡಿಆರ್ ತಾಂತ್ರಿಕ ವಿಶ್ಲೇಷಣೆ ನಡೆಸಲಾಗುತ್ತಿದೆ. ಗ್ರಾಮಾಂತರ ಇನ್‌ಸ್ಪೆಕ್ಟರ್ ಸಂತೋಷ್ ಶೆಟ್ಟಿ ಮತ್ತು ಪಿಎಸ್‌ಐ ಪಾಟೀಲ್ ಅವರು ಪರಿಣಿತರ ನೆರವಿನೊಂದಿಗೆ ಈ ಪ್ರಕರಣದ ತನಿಖೆ ಮುಂದುವರಿಸಿದ್ದು, ಶೀಘ್ರದಲ್ಲೇ ಭೇದಿಸಲಿದ್ದಾರೆ ಎಂದು ತಿಳಿಸಿದರು.
ಇನ್ನು ಸುವಿಧತಾ ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ, ಆರಂಭದಲ್ಲಿ ಸಿಸಿಟಿವಿ ದೃಶ್ಯಾವಳಿಗಳ ದೇಹ ರಚನೆ (Body morphology) ಆಧಾರದ ಮೇಲೆ ರಾಜಸ್ಥಾನಕ್ಕೆ ವಿಶೇಷ ತಂಡವನ್ನು ಕಳುಹಿಸಿ ಕೆಲವರನ್ನು ಕರೆತಂದು ವಿಚಾರಣೆ ನಡೆಸಲಾಗಿತ್ತು. ಆದರೆ ತಾಂತ್ರಿಕ ಪರಿಶೀಲನೆ ವೇಳೆ ಆ ತಂಡ ಭಾಗಿಯಾಗಿಲ್ಲ ಎಂಬುದು ದೃಢಪಟ್ಟಿದೆ. ಈ ಹಿಂದೆ ಸಾಗರದಲ್ಲಿ ಕನ್ನಗಳ್ಳತನ ಎಸಗಿದ್ದ ಹೊರರಾಜ್ಯದ ತಂಡವೇ ಇದರಲ್ಲಿ ಭಾಗಿಯಾಗಿರುವ ಬಲವಾದ ಶಂಕೆ ಇದ್ದು, ಗಣೇಶೋತ್ಸವ ಬಂದೋಬಸ್ತ್ ಕಾರ್ಯ ಮುಗಿದಿರುವುದರಿಂದ ಶೀಘ್ರದಲ್ಲೇ ಈ ಕೃತ್ಯವೆಸಗಿದ ಹೊರರಾಜ್ಯದ ಜಾಲವನ್ನು ಪತ್ತೆಹಚ್ಚಿ ಬಂಧಿಸಲಾಗುವುದು ಎಂದು ಸಾಗರ ಎಎಸ್ಪಿ ಡಾ. ಬೆನಕ ಪ್ರಸಾದ್ ತಿಳಿಸಿದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..