ಬೆಂಗಳೂರು: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಸ್ಟ್ರೇ ವೇಕೆನ್ಸಿ ಸುತ್ತಿನ ಸೀಟು ಹಂಚಿಕೆಯ ವೇಳಾಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶುಕ್ರವಾರ ಪ್ರಕಟಿಸಿದ್ದು, ಅ.13ರಿಂದ 16ರವರೆಗೆ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ.
ಪ್ರಸಕ್ತ ಸಾಲಿನ ಯುಜಿ ನೀಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದು, ಇದುವರೆಗೂ ಪ್ರಾಧಿಕಾರದಲ್ಲಿ ನೋಂದಣಿ ಮಾಡದವರು ಹೊಸದಾಗಿ ಅರ್ಜಿ ಸಲ್ಲಿಸಬಹುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹಚ್.ಪ್ರಸನ್ನ ತಿಳಿಸಿದ್ದಾರೆ. ಶುಲ್ಕ ಪಾವತಿ ನಂತರ ವೆರಿಫಿಕೇಷನ್ ಸ್ಲಿಪ್ ಡೌನ್‌ಲೋಡ್ ಮಾಡಿಕೊಂಡು ಬಳಿಕ ಕಾಷನ್ ಡೆಪಾಸಿಟ್ ಕಟ್ಟಿ, ಆಪ್ಷನ್ಸ್ ದಾಖಲಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಅ.16ರಿಂದ 19ರವರೆಗೆ ಹೊಸದಾಗಿ ಆಪ್ಷನ್ಸ್ ದಾಖಲಿಸಲು ಅವಕಾಶ ನೀಡಲಾಗಿದೆ. ಆಪ್ಷನ್ಸ್ ದಾಖಲಿಸುವುದಕ್ಕೂ ಮುನ್ನ ಕಾಷನ್ ಡೆಪಾಸಿಟ್ ಕಟ್ಟುವುದು ಕಡ್ಡಾಯ ಎಂದು ಅವರು ಹೇಳಿದ್ದಾರೆ.
₹1,00,000 ಕಾಷನ್ ಡೆಪಾಸಿಟ್ ಕಟ್ಟುವ ಅಭ್ಯರ್ಥಿಗಳು ವೈದ್ಯಕೀಯ ಕೋರ್ಸ್ ನ ಸರ್ಕಾರಿ ಸೀಟುಗಳು ಹಾಗೂ ದಂತ ವೈದ್ಯಕೀಯ ಕೋರ್ಸ್ ನ ಎಲ್ಲ ರೀತಿಯ ಸೀಟುಗಳ ಪ್ರವೇಶಕ್ಕೆ ಆಪ್ಷನ್ಸ್ ದಾಖಲಿಸಲು ಅರ್ಹರಾಗುತ್ತಾರೆ ₹12,00,117 ಕಾಷನ್ ಡೆಪಾಸಿಟ್ ಕಟ್ಟುವ ಅಭ್ಯರ್ಥಿಗಳು G (ಸರ್ಕಾರಿ) ಮತ್ತು P (ಪ್ರೆವೈಟ್) ಸೀಟುಗಳಿಗೆ ಆಪ್ಷನ್ಸ್ ದಾಖಲಿಸಲು ಅರ್ಹರಾಗುತ್ತಾರೆ. ₹25 ಲಕ್ಷ ಕಾಷನ್ ಡೆಪಾಸಿಟ್ ಕಟ್ಟುವ ಅಭ್ಯರ್ಥಿಗಳು ಎಲ್ಲ ರೀತಿಯ ಸೀಟುಗಳ ಪ್ರವೇಶಕ್ಕೆ ಆಪ್ಷನ್ಸ್ ದಾಖಲಿಸಬಹುದು ಎಂದು ಅವರು ವಿವರಿಸಿದರು.
ಸೀಟು ಹಂಚಿಕೆ ನಂತರ ಕಾಲೇಜಿಗೆ ವರದಿ ಮಾಡಿಕೊಳ್ಳದಿದ್ದಲ್ಲಿ ಕಾಷನ್ ಡೆಪಾಸಿಟ್ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಹಾಗೂ ನಿಯಮಾನುಸಾರ ದಂಡವನ್ನೂ ಪಾವತಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಯಾರೆಲ್ಲ ಅರ್ಹರು?
ಇದುವರೆಗೂ ಕೆಇಎ ಮೂಲಕ ಯಾವುದೇ ಸೀಟು ಹಂಚಿಕೆ ಮಾಡಿಕೊಳ್ಳದವರು ಹಾಗೂ ದಂತ ವೈದ್ಯಕೀಯ ಸೀಟು ಸಿಕ್ಕಿ, ವೈದ್ಯಕೀಯ ಸೀಟುಗಳಿಗೆ ಸೇರ ಬಯಸುವವರು ಈ ಸುತ್ತಿನಲ್ಲಿ ಭಾಗವಹಿಸಬಹುದು ಎಂದು ಅವರು ವಿವರಿಸಿದ್ದಾರೆ.
ಯಾರೆಲ್ಲ ಭಾಗವಹಿಸುವಂತಿಲ್ಲ?
ಅಖಿಲ ಭಾರತ, ಡೀಮ್ಡ್ ವಿವಿ ಸೇರಿ ಬೇರೆ ಯಾವುದೇ ರಾಜ್ಯಗಳ ಮೂಲಕ ಮೊದಲ ಮೂರು ಸುತ್ತುಗಳಲ್ಲಿ ಸೀಟು ಹಂಚಿಕೆಯಾದವರು ಈ ಸುತ್ತಿನಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ ಎಂದಿದ್ದಾರೆ.
ಶುಲ್ಕ ನೋಡಿಯೇ ಆಪ್ಷನ್ಸ್ ದಾಖಲಿಸಿ
ಉಳಿಕೆ ಸೀಟು ಮತ್ತು ಅದರ ಶುಲ್ಕದ ವಿವರಗಳನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಿದ್ದು, ಅದನ್ನು ಸರಿಯಾಗಿ ನೋಡಿಯೇ ಆಪ್ಷನ್ಸ್ ದಾಖಲಿಸಲು ಮುಂದಾಗಿ. ಈಗಾಗಲೇ ಇತರ ಕೋರ್ಸ್ ಗಳಿಗೆ ಪ್ರವೇಶ ಪಡೆದು ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವವರು ಪೋಷಕರ ಜತೆ ಚರ್ಚಿಸಿಯೇ ಆಪ್ಷನ್ಸ್ ದಾಖಲಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.