ಬೆಂಗಳೂರು : ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿನೂತನ ಮಾದರಿಯಲ್ಲಿ ಭಿಕ್ಷಾಟನೆ ನಡೆಸುತ್ತಿದ್ದ ದೆಹಲಿ ಮೂಲದ ಅಮೀನ್ ಎಂಬಾತನನ್ನು ಸಿಐಎಸ್ಎಫ್ (CISF) ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ವಿಮಾನ ನಿಲ್ದಾಣಕ್ಕೆ ಬರುವ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಈತ ತನ್ನ ಕರಾಮತ್ತು ಮೆರೆಯುತ್ತಿದ್ದ.
ಪ್ರಯಾಣಿಕರ ಬಳಿ ತೆರಳುವ ಅಮೀನ್, ತಾನು ಬ್ಯಾಗ್ ಅಥವಾ ಪರ್ಸ್ ಕಳೆದುಕೊಂಡಿರುವುದಾಗಿ ನಂಬಿಸುತ್ತಿದ್ದ. ಬಳಿಕ ತುರ್ತು ಅಗತ್ಯವಿದೆ ಎಂದು ಹೇಳಿ ತನ್ನ ಮೊಬೈಲ್‌ನ ಕ್ಯೂಆರ್ ಕೋಡ್ (QR Code) ನೀಡಿ ಡಿಜಿಟಲ್ ಮೂಲಕ ಹಣ ಪಡೆದುಕೊಳ್ಳುತ್ತಿದ್ದನು. ಹೀಗೆ ಮುಗ್ಧ ಪ್ರಯಾಣಿಕರಿಂದ ಈತ ಸಾವಿರಾರು ರೂಪಾಯಿಗಳನ್ನು ಅಕ್ರಮವಾಗಿ ಸಂಗ್ರಹಿಸುತ್ತಿದ್ದದ್ದು ವಿಚಾರಣೆಯಿಂದ ತಿಳಿದುಬಂದಿದೆ.
ಸಂಶಯಗೊಂಡ ಸಿಐಎಸ್ಎಫ್ ಸಿಬ್ಬಂದಿ ಆತನ ಮೊಬೈಲ್ ಪರಿಶೀಲಿಸಿದಾಗ ಅಕ್ರಮ ಹಣಕಾಸು ವಹಿವಾಟು ಬೆಳಕಿಗೆ ಬಂದಿದೆ. ಆತ ಬೆಂಗಳೂರಿನಿಂದ ಮುಂಬೈಗೆ ವಿಮಾನ ಟಿಕೆಟ್ ಬುಕ್ ಮಾಡಿಕೊಂಡಿದ್ದು, ವಿಮಾನದ ಸಮಯಕ್ಕೂ ಮುನ್ನವೇ ಬಂದು ಈ ದಂಧೆ ನಡೆಸುತ್ತಿದ್ದನು. ವಿಚಾರಣೆಯ ಬಳಿಕ ಪೊಲೀಸರು ಆತನಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದು, ಮುಂಬೈ ಸೇರಿದಂತೆ ದೇಶದ ಇತರ ವಿಮಾನ ನಿಲ್ದಾಣಗಳಲ್ಲೂ ಇಂತಹ ಗ್ಯಾಂಗ್ ಕಾರ್ಯಾಚರಣೆ ನಡೆಸುತ್ತಿರುವ ಶಂಕೆ ವ್ಯಕ್ತವಾಗಿದೆ.