LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ದೆಹಲಿ ಸಭೆ ವಿಫಲವಾದರೆ ಹೆದ್ದಾರಿ ಬಂದ್: ಸಾಗರ-ಹೊಸನಗರ ಬರಪೀಡಿತ ಘೋಷಣೆಗೆ ದಿನೇಶ್ ಶಿರವಾಳ ಆಗ್ರಹ

ಸಾಗರ: ರೈತರು ಬೆಳೆದ ಎಲ್ಲಾ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಹಾಗೂ ಡಾ. ಸ್ವಾಮಿನಾಥನ್ ವರದಿ ಜಾರಿಗೆ ಒತ್ತಾಯಿಸಿ ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಮಹಾರಾಷ್ಟ್ರ, ಗೋವಾ ಹಾಗೂ ರಾಜ್ಯದ ಎಲ್ಲಾ ಜಿಲ್ಲೆಗಳಿಂದ 3 ಲಕ್ಷಕ್ಕೂ ಅಧಿಕ ರೈತರು ಭಾಗವಹಿಸಿದ್ದರು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ನಿವಾಸಕ್ಕೂ ಮುತ್ತಿಗೆ ಹಾಕಲಾಗಿತ್ತು. ಈ ಹೋರಾಟವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಸ್ವಾಮಿನಾಥನ್ ವರದಿ ಜಾರಿ ಹಾಗೂ ಕಬ್ಬಿನ ಎಂಎಸ್‌ಪಿ, ಎಫ್‌ಆರ್‌ಪಿ ನಿಗದಿ ಕುರಿತು ಚರ್ಚಿಸಲು ಇದೇ ತಿಂಗಳ 12ರಂದು ದೆಹಲಿಯಲ್ಲಿ ಮಹತ್ವದ ಸಭೆ ಕರೆದಿದೆ ಎಂದು ಶಿವಮೊಗ್ಗ ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ದಿನೇಶ್ ಶಿರವಾಳ ತಿಳಿಸಿದ್ದಾರೆ.

ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು..

​ದೆಹಲಿಯಲ್ಲಿ ನಡೆಯುವ ಮಹತ್ವದ ಸಭೆಯಲ್ಲಿ ರಾಜ್ಯದ 30ಕ್ಕೂ ಹೆಚ್ಚು ರೈತ ಮುಖಂಡರೊಂದಿಗೆ ತಾವೂ ಭಾಗವಹಿಸುತ್ತಿರುವುದಾಗಿ ತಿಳಿಸಿದ ಅವರು, ಒಂದು ವೇಳೆ ಈ ಸಭೆ ವಿಫಲವಾದರೆ ಅಕ್ಟೋಬರ್ 13ರಂದು ರಾಜ್ಯಾದ್ಯಂತ ಇರುವ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಿ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

​ಇತ್ತೀಚೆಗೆ ತಾಲೂಕಿನಲ್ಲಿ ರೈತರ ಬೆಳೆಗಳನ್ನು ನಾಶಪಡಿಸುವ ಕಿಡಿಗೇಡಿಗಳ ಕೃತ್ಯಗಳು ಹೆಚ್ಚಾಗುತ್ತಿವೆ. ಮೊನ್ನೆಯಷ್ಟೇ ತಡಗಳಲೆ ಗ್ರಾಮದಲ್ಲಿ ರೈತರು ಬೆಳೆದಿದ್ದ ಅಡಿಕೆ ಗಿಡಗಳನ್ನು ದುಷ್ಕರ್ಮಿಗಳು ನಾಶಪಡಿಸಿದ್ದಾರೆ. ಈ ಹಿಂದೆ ಕೆಂಚಿಕೊಪ್ಪ ಗ್ರಾಮದಲ್ಲಿ ಅರಣ್ಯ ಇಲಾಖೆ ನೆಟ್ಟಿದ್ದ 6,000 ಗಿಡಗಳನ್ನು ರಾತ್ರೋರಾತ್ರಿ ಕಿತ್ತು ಹಾಕಲಾಗಿತ್ತು. ಇಂತಹ ಘಟನೆಗಳಿಂದ ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು ಸ್ಪಷ್ಟವಾಗುತ್ತಿದೆ. ಪೊಲೀಸರು ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ, ಕಿಡಿಗೇಡಿಗಳನ್ನು ಬಂಧಿಸುವುದರ ಜೊತೆಗೆ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಸಂತ್ರಸ್ತ ರೈತರಿಗೆ ಪರಿಹಾರ ಕೊಡಿಸಬೇಕು ಎಂದು ಆಗ್ರಹಿಸಿದರು.

​ರಾಜ್ಯದಲ್ಲಿ ಭೀಕರ ಬರಗಾಲವಿದ್ದು, ಸರ್ಕಾರ 177 ರಿಂದ 180ಕ್ಕೂ ಹೆಚ್ಚು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಆದರೆ ಜಿಲ್ಲೆಯ ಸಾಗರ ಮತ್ತು ಹೊಸನಗರ ತಾಲೂಕುಗಳನ್ನು ಕೈಬಿಟ್ಟಿರುವುದು ತಾರತಮ್ಯದ ನೀತಿಯಾಗಿದೆ. ಬರಪೀಡಿತ ಘೋಷಣೆಗೆ ಮಳೆಯ ಪ್ರಮಾಣ ಮಾನದಂಡವೋ ಅಥವಾ ರಾಜಕೀಯ ಪ್ರಭಾವ ಮಾನದಂಡವೋ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು. ಕೂಡಲೇ ಈ ಎರಡೂ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಬೇಕು, ಇಲ್ಲವಾದಲ್ಲಿ ದೆಹಲಿಯ ಸಭೆಯಿಂದ ಮರಳಿದ ನಂತರ ಸಾಗರ ಹಾಗೂ ಹೊಸನಗರ ಭಾಗದ ರೈತರನ್ನು ಒಗ್ಗೂಡಿಸಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

news_1791612284_0_476.webp

​ಭೂ ನ್ಯಾಯಮಂಡಳಿ ನಿಷ್ಕ್ರಿಯತೆ ಖಂಡಿಸಿ ರೈತ ಸಂಘದಿಂದ ಉಗ್ರ ಹೋರಾಟದ ಎಚ್ಚರಿಕೆ: ರಮೇಶ್ ಕೆಳದಿ

ಶಿವಮೊಗ್ಗ ಜಿಲ್ಲಾ ರೈತ ಸಂಘದ ಕಾರ್ಯದರ್ಶಿ ರಮೇಶ್ ಕೆಳದಿ ಮಾತನಾಡಿ ರಾಜ್ಯ ಹಾಗೂ ಜಿಲ್ಲೆಯ ಜ್ವಲಂತ ರೈತ ಸಮಸ್ಯೆಗಳನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದು, ನಿಯೋಗದ ಮೂಲಕ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ದಿನೇಶ್ ಶಿರವಾಳ ಅವರು ನವದೆಹಲಿಗೆ ತೆರಳುತ್ತಿದ್ದಾರೆ. ಅವರ ಈ ಪ್ರಯತ್ನಕ್ಕೆ ಕರ್ನಾಟಕ ರಾಜ್ಯ ರೈತ ಸಂಘದ ಶಿವಮೊಗ್ಗ ಜಿಲ್ಲಾ ಹಾಗೂ ಸಾಗರ ತಾಲೂಕು ಘಟಕದ ವತಿಯಿಂದ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.

​ಸಾಗರ ತಾಲೂಕಿನಲ್ಲಿ ಪ್ರಸ್ತುತ ಶಾಸಕರು ಅಧಿಕಾರಕ್ಕೆ ಬಂದು ಎರಡೂವರೆ ಮೂರು ವರ್ಷಗಳು ಕಳೆಯುತ್ತಾ ಬಂದಿದ್ದರೂ ಭೂ ನ್ಯಾಯಮಂಡಳಿಯಲ್ಲಿರುವ ನೂರಾರು ಪ್ರಕರಣಗಳು ಇತ್ಯರ್ಥವಾಗದೆ ಉಳಿದಿವೆ. ಸಂಪೂರ್ಣ ಆಡಳಿತ ಮಂಡಳಿ ಹಾಗೂ ಭೂ ನ್ಯಾಯಮಂಡಳಿ ಸದಸ್ಯರು ನಿಷ್ಕ್ರಿಯರಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

​ಹಿಂದೆ ಭೂಮಾಲೀಕರು ರೈತರನ್ನು ಶೋಷಣೆ ಮಾಡುತ್ತಿದ್ದರೆ, ಈಗ ಎಸಿ (ಸಹಾಯಕ ಆಯುಕ್ತರು) ಹಾಗೂ ಭೂ ನ್ಯಾಯಮಂಡಳಿಯವರು ರೈತರನ್ನು ಶೋಷಿಸುತ್ತಿದ್ದಾರೆ ಎಂದು ಆರೋಪಿಸಿದರು. ಹಾಲಿ ಸ್ವಾಧೀನ ಅನುಭವವಿದ್ದರೂ, ಅಳತೆಯಾಗಿದ್ದರೂ ಹಕ್ಕುಪತ್ರ ನೀಡುವ ಕೆಲಸ ಆಗುತ್ತಿಲ್ಲ. ಸುಮಾರು 20 ಸಭೆಗಳಲ್ಲಿ ರೈತರನ್ನು ಏಕಾಏಕಿ ಕಚೇರಿಗೆ ಕರೆಯಿಸಿ, ಅರ್ಜಿಗಳನ್ನು ಇತ್ಯರ್ಥಪಡಿಸದೆ ವಾಪಸ್ ಕಳುಹಿಸುತ್ತಿರುವ ಎಸಿ ಅವರ ಕ್ರಮವನ್ನು ರೈತ ಸಂಘ ಬಲವಾಗಿ ಖಂಡಿಸುತ್ತದೆ ಎಂದರು.

​ಜಿಲ್ಲಾಧ್ಯಕ್ಷರು ದೆಹಲಿ ಪ್ರವಾಸದಿಂದ ಮರಳಿದ ನಂತರ ಈ ನಿಷ್ಕ್ರಿಯತೆಯ ವಿರುದ್ಧ ತಾಲೂಕಿನಲ್ಲಿ ಬೃಹತ್ ಮಟ್ಟದ ಉಗ್ರ ಹೋರಾಟವನ್ನು ರೂಪಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಇತ್ತೀಚೆಗೆ ಪ್ರಕಟವಾಗಿರುವ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ರೈತ ಸಂಘದ ಕಾರ್ಯಕರ್ತರು ಆಯ್ದ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಆಸಕ್ತಿ ತೋರಿದ್ದಾರೆ. ಈ ಕುರಿತು ಈಗಾಗಲೇ ಒಂದು ಸುತ್ತಿನ ಮಾತುಕತೆ ಮುಗಿದಿದ್ದು, ಮುಂದಿನ ಸುತ್ತಿನ ಸಭೆಯ ಬಳಿಕ ಯಾವ ಕ್ಷೇತ್ರಗಳಲ್ಲಿ ಯಾರನ್ನು ಕಣಕ್ಕಿಳಿಸಬೇಕು ಎಂಬುದನ್ನು ಅಂತಿಮಗೊಳಿಸಿ ಮಾಧ್ಯಮಗಳ ಮುಂದೆ ಬಹಿರಂಗಪಡಿಸಲಾಗುವುದು ಎಂದು ರಮೇಶ್ ಕೆಳದಿ ಮಾಹಿತಿ ನೀಡಿದರು.

​ಈ ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘ ರಾಜಪ್ಪ ಕುದೂರು, ಹುಚ್ಚಪ್ಪ, ಯೋಗೇಶ್ ಸಂಪಳ್ಳಿ, ರಾಮಚಂದ್ರ ಕುದೂರು ಹಾಗೂ ಸೋಮಶೇಖರ್ ಉಪಸ್ಥಿತರಿದ್ದರು.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಇನ್ಮೇಲೆ ಡೆಡ್ ಬಾಡಿ ಮೇಲೆ ಬಿಲ್ ವಸೂಲಿ ಬಂದ್ : ಮೃತದೇಹ ಹಸ್ತಾಂತರಕ್ಕೆ ಶೀಘ್ರ ಹೊಸ ಪಾಲಿಸಿ!ಬೆಂಗಳೂರಲ್ಲಿ ಚಾಕುವಿನಿಂದ ಇರಿದು ವ್ಯಕ್ತಿಯ ಬರ್ಬರ ಹತ್ಯೆ!BREAKING : ಖಾಸಗಿ ಆಸ್ಪತ್ರೆಗಳ ಕಳ್ಳಾಟಕ್ಕೆ ಬ್ರೇಕ್ : ಇನ್ಮುಂದೆ ರಶೀದಿಯಲ್ಲಿ ಔಷಧಗಳ ಬೆಲೆ ನಮೂದು ಕಡ್ಡಾಯ!🌺🌼🔱 ನವರಾತ್ರಿ ಮೊದಲನೇ ದಿನ – ಶ್ರೀ ಶೈಲಪುತ್ರಿ ದೇವಿ ಆರಾಧನೆ 🔱🌼🌺BIG NEWS : ಹಬ್ಬದ ಸಂದರ್ಭದಲ್ಲೆ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ : ರಾಜ್ಯದಲ್ಲಿ ಗಗನಕ್ಕೇರಿದ ಅಕ್ಕಿ, ತೊಗರಿಬೇಳೆ ಬೆಲೆ!GOOD NEWS : 'KSRTC' ಯಿಂದ ದಸರಾ ಸಂಭ್ರಮಕ್ಕೆ ಸ್ಪೆಷಲ್ ಗಿಫ್ಟ್: 3,000ಕ್ಕೂ ಹೆಚ್ಚು ವಿಶೇಷ ಬಸ್‌ಗಳ ಸಂಚಾರ!ಇಂದಿನಿಂದ ಸೊರಬದ ಚಂದ್ರಗುತ್ತಿಯಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವ ಆರಂಭBIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!