ಹಾಸನದ ಪ್ರಸಿದ್ಧ ಶ್ರೀ ಹಾಸನಾಂಬ ದೇವಿ ಹಾಗೂ ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವವು ಇದೇ ತಿಂಗಳ 29 ರಿಂದ ಪ್ರಾರಂಭವಾಗಲಿದ್ದು, ಹಬ್ಬವನ್ನು ಅತ್ಯಂತ ಅಚ್ಚುಕಟ್ಟಾಗಿ ಮತ್ತು ಯಶಸ್ವಿಯಾಗಿ ನೆರವೇರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಗರದ ವಿದ್ಯುತ್ ದೀಪಾಲಂಕಾರವನ್ನು ಮೈಸೂರು ದಸರಾ ಮಾದರಿಯಲ್ಲಿ ಅತ್ಯಂತ ಆಕರ್ಷಕವಾಗಿ ವಿನ್ಯಾಸಗೊಳಿಸಬೇಕು ಎಂದು ನಿರ್ದೇಶನ ನೀಡಿದರು.
ಜಾತ್ರೋತ್ಸವಕ್ಕೆ ಆಗಮಿಸುವ ಭಕ್ತಾದಿಗಳಿಗೆ ಸುಗಮ, ಸುರಕ್ಷಿತ ಹಾಗೂ ತ್ವರಿತ ದರ್ಶನ ಕಲ್ಪಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ. ಗಂಟೆಗಟ್ಟಲೆ ಸರದಿಯಲ್ಲಿ ನಿಂತು ಸಾರ್ವಜನಿಕರು ತೊಂದರೆ ಅನುಭವಿಸುವುದನ್ನು ತಪ್ಪಿಸಲು ಈ ಬಾರಿ ದರ್ಶನ ಪಾಸ್‌ಗಳ ಸಂಖ್ಯೆಯನ್ನು ಕಡಿತಗೊಳಿಸಲಾಗುವುದು. ಗಣ್ಯರ ದರ್ಶನಕ್ಕೆ ನಿರ್ದಿಷ್ಟ ಸಮಯ ನಿಗದಿಪಡಿಸಿ, ಸಾರ್ವಜನಿಕ ಭಕ್ತರಿಗೆ ಹೆಚ್ಚಿನ ಸಮಯದ ಅನುಕೂಲ ಮಾಡಿಕೊಡಲು ತೀರ್ಮಾನಿಸಲಾಗಿದೆ. ಅಲ್ಲದೆ, ಸಣ್ಣ ಮಕ್ಕಳೊಂದಿಗೆ ಬರುವ ಮಹಿಳೆಯರಿಗೆ ಪ್ರತ್ಯೇಕ ಸರತಿ ಸಾಲಿನ ವ್ಯವಸ್ಥೆ ಮಾಡುವ ಬಗ್ಗೆಯೂ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಯಿತು.
ಭಕ್ತರ ಅನುಕೂಲಕ್ಕಾಗಿ ಕುಡಿಯುವ ನೀರು, ಮಜ್ಜಿಗೆ ವಿತರಣೆ, ನೆರಳಿನ ಆಸರೆ, ವಿದ್ಯುತ್ ಪೂರೈಕೆ, ವಾಹನ ನಿಲುಗಡೆ ಹಾಗೂ ನೈರ್ಮಲ್ಯ ನಿರ್ವಹಣೆಗೆ ಹೆಚ್ಚಿನ ಪ್ರಾಶಸ್ತ ನೀಡಲಾಗಿದೆ. ತಾತ್ಕಾಲಿಕ ಶೌಚಾಲಯಗಳನ್ನು ನಿರ್ಮಿಸಿ, ಸ್ವಚ್ಛತಾಗಾರರನ್ನು ಪಾಳಿ ಆಧಾರದಲ್ಲಿ ಕರ್ತವ್ಯಕ್ಕೆ ನಿಯೋಜಿಸಲು ಸೂಚಿಸಲಾಗಿದೆ. ಇದಲ್ಲದೆ ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಲ್ಲಿ ಒಂದು ವಾರಗಳ ಕಾಲ ಫಲಪುಷ್ಪ ಪ್ರದರ್ಶನ, ಶ್ವಾನ ಪ್ರದರ್ಶನ, ಜಾನುವಾರು ಪ್ರದರ್ಶನ ಹಾಗೂ ವಸ್ತುಪ್ರದರ್ಶನಗಳನ್ನು ಆಯೋಜಿಸಲಾಗುವುದು. ಜಾನುವಾರು ಪ್ರದರ್ಶನದಲ್ಲಿ ಭಾಗವಹಿಸುವವರಿಗೆ ಪ್ರಮಾಣಪತ್ರ, ಸ್ಮರಣಿಕೆ ಹಾಗೂ ಉತ್ತಮ ರಾಸುಗಳಿಗೆ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಗುವುದು.
ಸಭೆಯಲ್ಲಿದ್ದ ಶಾಸಕ ಸ್ವರೂಪ್ ಪ್ರಕಾಶ್ ಅವರು ನಗರದ ರಸ್ತೆಗಳಲ್ಲಿರುವ ಗುಂಡಿಗಳನ್ನು ತಕ್ಷಣವೇ ಮುಚ್ಚುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಸಾರ್ವಜನಿಕ ಜೀವನದಲ್ಲಿ ಅಪಾದನೆಗಳು ಬರುವುದು ಸಹಜ, ಅದಕ್ಕೆ ಎದೆಗುಂದದೆ ಅಧಿಕಾರಿಗಳು ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು ಎಂದು ಸಚಿವರು ಕಿವಿಮಾತು ಹೇಳಿದರು. ಈ ಮಹತ್ವದ ಸಭೆಯಲ್ಲಿ ಜಿಲ್ಲಾಧಿಕಾರಿ ಲತಾ ಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ, ಜಿಲ್ಲಾ ಪಂಚಾಯತ್ ಸಿಇಒ ಶುಭಂ ಶುಕ್ಲ ಸೇರಿದಂತೆ ಹಲವು ಪ್ರಮುಖ ಜಿಲ್ಲಾಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.