ರಿಯಾದ್: ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಲ್ಲಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಂತಿದ್ದ ವಿಮಾನವೊಂದರಿಂದ ದಟ್ಟ ಹೊಗೆ ಹೊರಹೊಮ್ಮಿದ್ದು, ಯೆಮೆನ್‌ನ ಹೌತಿ ಬಂಡುಕೋರರು ನಡೆಸಿದ ದಾಳಿಯ ಶಂಕೆ ವ್ಯಕ್ತವಾಗಿದೆ. ಘಟನೆಯ ಬೆನ್ನಲ್ಲೇ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಪ್ರತ್ಯಕ್ಷದರ್ಶಿಗಳು ಹಾಗೂ ಮೂಲಗಳ ಪ್ರಕಾರ, ರನ್‌ವೇ ಸಮೀಪ ನಿಲುಗಡೆ ಮಾಡಲಾಗಿದ್ದ ವಿಮಾನದಿಂದ ಹೊಗೆ ಕಾಣಿಸಿಕೊಂಡಿದೆ. ಈ ಘಟನೆಯಿಂದಾಗಿ ವಿಮಾನ ನಿಲ್ದಾಣದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸುರಕ್ಷತಾ ದೃಷ್ಟಿಯಿಂದ ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿದೆ. ವಿಮಾನ ಸಂಚಾರದ ಮೇಲೆ ನಿಗಾ ಇಡುವ ‘ಫ್ಲೈಟ್‌ರಾಡಾರ್ 24’ (Flightradar24) ಸಂಸ್ಥೆಯು 'ಎಕ್ಸ್' ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ರಿಯಾದ್ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ. ಕಳೆದ 80 ನಿಮಿಷಗಳಿಂದ ಯಾವುದೇ ವಿಮಾನ ಲ್ಯಾಂಡಿಂಗ್ ಆಗಿಲ್ಲ ಹಾಗೂ 90 ನಿಮಿಷಗಳಿಂದ ಯಾವುದೇ ವಿಮಾನ ಟೇಕ್‌ಆಫ್ ಆಗಿಲ್ಲ ಎಂದು ತಿಳಿಸಿದೆ.
ವಿಮಾನ ನಿಲ್ದಾಣ, ತೈಲ ಕೇಂದ್ರಗಳಿಗೆ ಹೌತಿ ಎಚ್ಚರಿಕೆ
ಇತ್ತ ಘಟನೆಯ ಬೆನ್ನಲ್ಲೇ ಯೆಮೆನ್‌ನ ಹೌತಿ ಬಂಡುಕೋರರ ಸೇನಾ ವಕ್ತಾರರು ಮಹತ್ವದ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಸೌದಿ ಅರೇಬಿಯಾದ ತೈಲ ಸಂಸ್ಕರಣಾ ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರು ತಕ್ಷಣವೇ ಆ ಸ್ಥಳಗಳಿಂದ ದೂರವಿರಬೇಕು, ತಾವು ದಾಳಿ ನಡೆಸಲು ನಿಗದಿಪಡಿಸಿರುವ ಸ್ಥಳಗಳಿಂದ ಹೊರಬರಬೇಕು ಎಂದು ಎಚ್ಚರಿಕೆ ನೀಡಿದ್ದಾರೆ. ಜತೆಗೆ ವಿವಿಧ ಅಂತರರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು ಹಾಗೂ ವಿಮಾನ ನಿಲ್ದಾಣಗಳಿಗೂ ತಮ್ಮ ಈ ಹಿಂದಿನ ಎಚ್ಚರಿಕೆಯನ್ನು ಹೌತಿ ವಕ್ತಾರರು ಪುನರುಚ್ಚರಿಸಿದ್ದಾರೆ.
ಆದಾಗ್ಯೂ, ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಹೊಗೆ ಅಥವಾ ಸಂಭವನೀಯ ದಾಳಿಯ ಕುರಿತು ಸೌದಿ ಅರೇಬಿಯಾ ಸರ್ಕಾರವಾಗಲಿ ಅಥವಾ ಅಲ್ಲಿನ ವಿಮಾನಯಾನ ಪ್ರಾಧಿಕಾರವಾಗಲಿ ತಕ್ಷಣಕ್ಕೆ ಯಾವುದೇ ಅಧಿಕೃತ ದೃಢೀಕರಣ ನೀಡಿಲ್ಲ. ರಕ್ಷಣಾ ಪಡೆಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದು, ತನಿಖೆ ಮುಂದುವರಿದಿದೆ.