ಸಾಗರ/ತರೀಕೆರೆ: ಕುವೆಂಪು ವಿಶ್ವವಿದ್ಯಾಲಯ ಮಟ್ಟದ ಅಂತರ್ ಕಾಲೇಜು ಮಹಿಳೆಯರ ಗುಡ್ಡಗಾಡು ಓಟದ (ಕ್ರಾಸ್ ಕಂಟ್ರಿ) ಸ್ಪರ್ಧೆಯಲ್ಲಿ ಸಾಗರದ ಶ್ರೀಮತಿ ಇಂದಿರಾ ಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ಅಮೋಘ ಪ್ರದರ್ಶನ ನೀಡಿ ಪ್ರಥಮ ಸ್ಥಾನದೊಂದಿಗೆ ಚಾಂಪಿಯನ್‌ಶಿಪ್ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ತರೀಕೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಶ್ರಯದಲ್ಲಿ ಅಕ್ಟೋಬರ್ 7 ರಂದು 2026-27ನೇ ಸಾಲಿನ ಕುವೆಂಪು ವಿಶ್ವವಿದ್ಯಾಲಯ ಮಟ್ಟದ 10 ಕಿಲೋಮೀಟರ್ ಮಹಿಳೆಯರ ಗುಡ್ಡಗಾಡು ಓಟದ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಕಠಿಣ ಹಾದಿಯ ಈ ಸ್ಪರ್ಧೆಯಲ್ಲಿ ಅತ್ಯುತ್ತಮ ಸಾಮರ್ಥ್ಯ ತೋರಿದ ಸಾಗರದ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರ ತಂಡವು ಒಟ್ಟಾರೆ ಚಾಂಪಿಯನ್‌ಶಿಪ್ ಪಟ್ಟ ಅಲಂಕರಿಸಿತು.
ಈ ವಿಜೇತ ತಂಡದಲ್ಲಿ ಕುಮಾರಿ ಅಂಕಿತಾ, ಕುಮಾರಿ ಪ್ರಗತಿ, ಕುಮಾರಿ ತೃಪ್ತಿ, ಕುಮಾರಿ ರಾಧಿಕಾ, ಕುಮಾರಿ ಹಂಸವಾಹಿನಿ ಹಾಗೂ ಕುಮಾರಿ ಸುಪ್ರೀತ ಭಾಗವಹಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಕಾಲೇಜಿನ ವಿದ್ಯಾರ್ಥಿನಿಯರ ಈ ಅಭೂತಪೂರ್ವ ಕ್ರೀಡಾ ಸಾಧನೆಗೆ ಕಾಲೇಜು ಅಭಿವೃದ್ಧಿ ಸಮಿತಿಯ (ಸಿಡಿಸಿ) ಅಧ್ಯಕ್ಷರು ಮತ್ತು ಸಮಿತಿಯ ಎಲ್ಲಾ ಸದಸ್ಯರು, ಪ್ರಾಂಶುಪಾಲರಾದ ಡಾ. ರವೀಂದ್ರ ಜಿ. ಕಾಟೋಟಿ, ಐಕ್ಯುಎಸಿ (IQAC) ಸಂಯೋಜಕರಾದ ಡಾ. ಶಿವಾನಂದ ಭಟ್, ಕ್ರೀಡಾ ಸಂಯೋಜಕರಾದ ಡಾ. ಸಚಿನ್ ಬಿ.ಎಂ., ಸಹ-ಸಂಯೋಜಕಿ ಶ್ರೀಮತಿ ಶೈಲಜಾ ಎಚ್.ಕೆ. ಹಾಗೂ ದೈಹಿಕ ಶಿಕ್ಷಣ ನಿರ್ದೇಶಕಿ ಕುಮಾರಿ ಮಧುರಾಕ್ಷಿ ಎಚ್. ಅವರು ಹಾರ್ದಿಕವಾಗಿ ಅಭಿನಂದಿಸಿದ್ದಾರೆ.
ಜತೆಗೆ ಕಾಲೇಜಿನ ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿನಿಯರು ಕ್ರೀಡಾಪಟುಗಳ ಸಾಧನೆಯನ್ನು ಶ್ಲಾಘಿಸಿ ಶುಭ ಹಾರೈಸಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..