ಮಂಡ್ಯ: ತೀವ್ರ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಮದ್ದೂರು ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (ಟಿಎಪಿಸಿಎಂಎಸ್) ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಅಕ್ಟೋಬರ್ 9 ರಂದು ನಿಗದಿಯಾಗಿದ್ದ ಚುನಾವಣೆಗೆ ಕೋರ್ಟ್ ಬ್ರೇಕ್ ಹಾಕಿದ್ದು, ಅಧಿಕಾರದ ಗದ್ದುಗೆ ಹಿಡಿಯಲು ಸಜ್ಜಾಗಿದ್ದ ಕಾಂಗ್ರೆಸ್ ಪಾಳಯಕ್ಕೆ ತಾತ್ಕಾಲಿಕ ಹಿನ್ನಡೆಯಾಗಿದೆ.
ಈ ಹಿಂದೆ ಸೆಪ್ಟೆಂಬರ್ 27 ರಂದು ಸಂಘದ ಒಟ್ಟು 12 ಸ್ಥಾನಗಳಿಗೆ ಸಾರ್ವತ್ರಿಕ ಚುನಾವಣೆ ನಡೆದಿತ್ತು. ಭಾರಿ ಹೈಡ್ರಾಮಾ, ಗೊಂದಲ ಹಾಗೂ ತಡರಾತ್ರಿ ರಸ್ತೆ ತಡೆ ಪ್ರತಿಭಟನೆಗಳ ನಡುವೆ ಮತ ಎಣಿಕೆ ನಡೆದಿತ್ತು. ಈ ಪೈಕಿ 'ಎ' ತರಗತಿಯ 5 ಸ್ಥಾನಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ್ದರೆ, 'ಬಿ' ತರಗತಿಯಿಂದ ಜೆಡಿಎಸ್-ಬಿಜೆಪಿ ಮೈತ್ರಿಕೂಟದ 4 ಹಾಗೂ ಕಾಂಗ್ರೆಸ್‌ನ 3 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಇದರೊಂದಿಗೆ ಅಧಿಕಾರಿಗಳು ಹಾಗೂ ನಾಮನಿರ್ದೇಶಿತ ಸದಸ್ಯರ ಮತಗಳ ಬಲದೊಂದಿಗೆ ಸ್ಪಷ್ಟ ಬಹುಮತ ಗಳಿಸಿದ್ದ ಕಾಂಗ್ರೆಸ್, ಅಧ್ಯಕ್ಷ-ಉಪಾಧ್ಯಕ್ಷ ಪಟ್ಟವನ್ನು ಅಲಂಕರಿಸಲು ಭರ್ಜರಿ ಸಿದ್ಧತೆ ನಡೆಸಿತ್ತು.
ಆದರೆ ಈ ಚುನಾವಣಾ ಪ್ರಕ್ರಿಯೆಯನ್ನು ಪ್ರಶ್ನಿಸಿ ಕಲಾವತಿ ಎಂಬುವವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಾಧೀಶರಾದ ಜ್ಯೋತಿ ಎಂ. ಅವರ ಏಕಸದಸ್ಯ ಪೀಠವು ಅಕ್ಟೋಬರ್ 6 ರಂದು ಮಹತ್ವದ ಆದೇಶ ಹೊರಡಿಸಿದೆ. ವಿವಾದಕ್ಕೆ ಕಾರಣವಾಗಿರುವ 515 ಮತಗಳ ಎಣಿಕೆಯನ್ನು ಪೂರ್ಣಗೊಳಿಸಿದ ಬಳಿಕವಷ್ಟೇ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವಂತೆ ನ್ಯಾಯಾಲಯ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಪ್ರಕರಣದ ಮುಂದಿನ ವಿಚಾರಣೆಯನ್ನು ಹೈಕೋರ್ಟ್ ಇದೇ ಅಕ್ಟೋಬರ್ 27 ಕ್ಕೆ ಮುಂದೂಡಿದ್ದು, ಅಂದು ನಡೆಯುವ ನ್ಯಾಯಾಲಯದ ವಿಚಾರಣೆ ಮತ್ತು ನಿರ್ದೇಶನದ ಬಳಿಕವಷ್ಟೇ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ನೂತನ ದಿನಾಂಕ ಪ್ರಕಟವಾಗುವ ಸಾಧ್ಯತೆಯಿದೆ.
ವರದಿ: ಗಿರೀಶ್ ರಾಜ್, ಮಂಡ್ಯ