ಶಿವಮೊಗ್ಗ: ಕರ್ನಾಟಕ ಸರ್ಕಾರ ಅರಣ್ಯ ಇಲಾಖೆಯ ಶಿವಮೊಗ್ಗ ವನ್ಯಜೀವಿ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾಗಿರುವ 2026ನೇ ಸಾಲಿನ ವನ್ಯಜೀವಿ ಸಪ್ತಾಹದ ಅಂಗವಾಗಿ, ನಗರದ ಸಹ್ಯಾದ್ರಿ ವಿಜ್ಞಾನ ಕಾಲೇಜು ಆವರಣದಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ವನ್ಯಜೀವಿ ಚಿತ್ರಕಲೆ ಹಾಗೂ ಪ್ರಬಂಧ ಸ್ಪರ್ಧೆಯನ್ನು ಬುಧವಾರ ಆಯೋಜಿಸಲಾಗಿತ್ತು. ಆ ಮೂಲಕ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿಯನ್ನು ಮೂಡಿಸುವಂತ ಕೆಲಸವನ್ನು ಅರಣ್ಯ ಇಲಾಖೆ ಮಾಡಿ ಗಮನ ಸೆಳೆಯಿತು.
“ಆವಾಸ ಸ್ಥಾನಗಳ ಸಂಪರ್ಕ, ವನ್ಯಜೀವಿ ಸಮೃದ್ಧಿ” ಎಂಬ ರಾಷ್ಟ್ರೀಯ ಘೋಷವಾಕ್ಯದೊಂದಿಗೆ ಸಾರ್ವಜನಿಕರಲ್ಲಿ ಪರಿಸರ ಜಾಗೃತಿ ಮೂಡಿಸಲು ಸಪ್ತಾಹದ 6ನೇ ದಿನ ಈ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು.

ಪರಿಸರ ಪ್ರಜ್ಞೆ ಪಠ್ಯಕ್ಕೆ ಸೀಮಿತವಾಗದಿರಲಿ: ಪ್ರಾಚಾರ್ಯ ಕೃಷ್ಣಸ್ವಾಮಿ ಕೆ.
ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಚಾರ್ಯ ಕೃಷ್ಣಸ್ವಾಮಿ ಕೆ. ಅವರು, "ಪರಿಸರ ಮತ್ತು ವನ್ಯಜೀವಿಗಳ ಉಳಿವಿನಲ್ಲಿ ಇಂದಿನ ವಿದ್ಯಾರ್ಥಿ ಸಮೂಹದ ಪಾತ್ರ ಅತ್ಯಂತ ದೊಡ್ಡದಾಗಿದೆ. ಯುವಜನತೆ ಪರಿಸರ ಪ್ರಜ್ಞೆಯನ್ನು ಕೇವಲ ಪಠ್ಯಪುಸ್ತಕಗಳಿಗೆ ಸೀಮಿತಗೊಳಿಸದೆ, ತಮ್ಮ ನಿತ್ಯ ಜೀವನದಲ್ಲೂ ಅಳವಡಿಸಿಕೊಳ್ಳಬೇಕು. ಇಂತಹ ರಚನಾತ್ಮಕ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ನಿಸರ್ಗದ ಬಗೆಗಿನ ಕಾಳಜಿ ಮತ್ತು ಪ್ರೀತಿಯನ್ನು ಜಾಗೃತಗೊಳಿಸಲು ನೆರವಾಗುತ್ತವೆ," ಎಂದು ಅಭಿಪ್ರಾಯಪಟ್ಟರು.

ಆವಾಸಸ್ಥಾನಗಳ ರಕ್ಷಣೆಗೆ ಡಿಸಿಎಫ್ ಪ್ರಸನ್ನ ಕೃಷ್ಣ ಪಟಗಾರ್ ಕರೆ
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಿವಮೊಗ್ಗ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಪ್ರಸನ್ನ ಕೃಷ್ಣ ಪಟಗಾರ್ ಅವರು, "ಮಾನವನ ನಿರಂತರ ಹಸ್ತಕ್ಷೇಪದಿಂದಾಗಿ ಇಂದು ಪ್ರಾಣಿಗಳ ಸ್ವಾಭಾವಿಕ ಆವಾಸಸ್ಥಾನಗಳು ಛಿದ್ರವಾಗುತ್ತಿವೆ. 'ಆವಾಸ ಸ್ಥಾನಗಳ ಸಂಪರ್ಕ, ವನ್ಯಜೀವಿ ಸಮೃದ್ಧಿ' ಎಂಬ ಘೋಷವಾಕ್ಯವು ವನ್ಯಜೀವಿಗಳಿಗೆ ಮುಕ್ತ ಕಾರಿಡಾರ್‌ಗಳನ್ನು ಉಳಿಸಿಕೊಳ್ಳುವ ತುರ್ತು ಅಗತ್ಯವನ್ನು ಸಾರುತ್ತದೆ. ನಿಸರ್ಗದ ಸಮತೋಲನ ಕಾಪಾಡಲು ಅರಣ್ಯ ಹಾಗೂ ಪ್ರಾಣಿ ಸಂಕುಲದ ಸಂರಕ್ಷಣೆ ಅನಿವಾರ್ಯವಾಗಿದ್ದು, ಇದಕ್ಕೆ ಸಾರ್ವಜನಿಕರ ಮತ್ತು ಯುವ ಸಮುದಾಯದ ಸಹಕಾರ ಅಗತ್ಯ," ಎಂದರು.

ಪ್ರತಿಯೊಬ್ಬರ ಕರ್ತವ್ಯ ಎಂದ ಡಾ. ನಾಗರಾಜ ಪರಿಸರ
ಕಾರ್ಯಕ್ರಮದ ಸಂಚಾಲಕತ್ವ ವಹಿಸಿದ್ದ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪರಿಸರ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ನಾಗರಾಜ ಪರಿಸರ ಮಾತನಾಡಿ, "ವನ್ಯಜೀವಿಗಳ ಸಂರಕ್ಷಣೆ ಕೇವಲ ಅರಣ್ಯ ಇಲಾಖೆಯ ಕೆಲಸವಲ್ಲ, ಅದು ಪ್ರತಿಯೊಬ್ಬ ಜಾಗೃತ ನಾಗರಿಕನ ಹೊಣೆಗಾರಿಕೆ. ವಿದ್ಯಾರ್ಥಿ ದಿಸೆಯಲ್ಲೇ ಈ ಜವಾಬ್ದಾರಿಯನ್ನು ಮನದಟ್ಟು ಮಾಡುವ ಸಲುವಾಗಿ ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸಿ ಈ ಸ್ಪರ್ಧೆಯನ್ನು ರೂಪಿಸಲಾಗಿದೆ. ಚಿತ್ರಕಲೆ ಮತ್ತು ಪ್ರಬಂಧಗಳ ಮೂಲಕ ವಿದ್ಯಾರ್ಥಿಗಳು ಪರಿಸರದ ತುಡಿತವನ್ನು ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ," ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಪನ್ಮೂಲ ವ್ಯಕ್ತಿಗಳಿಂದ ಜಾಗೃತಿ ಮಾಹಿತಿ
ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ಐಯುಸಿಎನ್ (WCPA) ವನ್ಯಜೀವಿ ಸಂರಕ್ಷಿತ ಪ್ರದೇಶ ಆಯೋಗದ ಸದಸ್ಯ ಹಾಗೂ ಮಾಜಿ ವನ್ಯಜೀವಿ ಪರಿಪಾಲಕ ವಿನಾಯಕ ಎಸ್.ಜಿ. ಅವರು ವಿದ್ಯಾರ್ಥಿಗಳಿಗೆ ವನ್ಯಜೀವಿ ಸಂರಕ್ಷಣೆ ಮತ್ತು ಘೋಷವಾಕ್ಯದ ಹಿನ್ನೆಲೆಯ ಬಗ್ಗೆ ವಿಸ್ತಾರವಾದ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗುರುರಾಜ್ ಸಿ.ಬಿ., ವನ್ಯ ಜೀವಿ ವಲಯದ ಕಾರ್ಗಲ್ RFO ನವೀನ್ ಕುಮಾರ್, ಕೂಗಾರು RFO ಧನಂಜಯ್ ನಾಯ್ಕ್, ಸಿರಿಗೆರೆ DFC ವಿನಯ್, ಸಕ್ರೆಬೈಲು RFO ಅಂಥೇನಿ ರೇಗೋ, ಮುಗೊಡ್ತಿ RFO ನೂರ್ ಅಹ್ಮದ್, ಶಿವಮೊಗ್ಗ RFO ಬಾಬು, ಪರಿಸರ ಪ್ರೇಮಿ ಶ್ರವಣ್ ಸೇರಿದಂತೆ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕರು, ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ನಗರದ ವಿವಿಧ ಕಾಲೇಜುಗಳ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..