ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಮುಖ್ಯ ಕಚೇರಿಯಲ್ಲಿ ಬುಧವಾರದಂದು ಅತ್ಯಂತ ಅಪರೂಪದ ಹಾಗೂ ಹೃದಯಸ್ಪರ್ಶಿ ಸನ್ನಿವೇಶವೊಂದು ನಡೆಯಿತು. ದೃಷ್ಟಿಹೀನ ಬಾಲಕನೊಬ್ಬ ಸಾಂಕೇತಿಕವಾಗಿ ಬಿಡಿಎ ಅಧ್ಯಕ್ಷನಾಗಿ ಅಧಿಕಾರ ಚಲಾಯಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ. ಸಮಾಜದಲ್ಲಿ ವಿಶೇಷ ಚೇತನ ಮಕ್ಕಳು ಮುಖ್ಯವಾಹಿನಿಯಿಂದ ದೂರ ಉಳಿಯಬಾರದು ಮತ್ತು ಅವರಲ್ಲಿ ಆತ್ಮವಿಶ್ವಾಸ ಮೂಡಿಸಬೇಕು ಎಂಬ ಉನ್ನತ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
'ಜ್ಯೋತಿ ಸೇವಾ ಸ್ಕೂಲ್ ಫಾರ್ ದಿ ಬ್ಲೈಂಡ್' ಶಾಲೆಯ ಸುಮಾರು 65 ದೃಷ್ಟಿಹೀನ ಮಕ್ಕಳನ್ನು ಬಿಡಿಎ ಕಚೇರಿಗೆ ವಿಶೇಷ ಅತಿಥಿಗಳಾಗಿ ಆಹ್ವಾನಿಸಲಾಗಿತ್ತು. ಈ ವೇಳೆ ಮಕ್ಕಳ ಮುಗ್ಧತೆ ಹಾಗೂ ಅವರ ಉತ್ಸಾಹವನ್ನು ಕಂಡ ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್ ಅವರು, ತಮ್ಮ ಅಧಿಕೃತ ಅಧ್ಯಕ್ಷೀಯ ಕುರ್ಚಿಯ ಮೇಲೆ ‘ರಾಹುಲ್’ ಎಂಬ ಬಾಲಕನನ್ನು ಕೂರಿಸಿದರು. ಆತನನ್ನು 'ಒಂದು ದಿನದ ಬಿಡಿಎ ಅಧ್ಯಕ್ಷ'ನನ್ನಾಗಿ ಮಾಡಿ ಗೌರವಿಸಿದ್ದು, ಅಲ್ಲಿ ನೆರೆದಿದ್ದ ಅಧಿಕಾರಿಗಳು ಹಾಗೂ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.
ಈ ಭಾವನಾತ್ಮಕ ಕ್ಷಣದಲ್ಲಿ ಮಾತನಾಡಿದ ಅಧ್ಯಕ್ಷ ಎನ್.ಎ. ಹ್ಯಾರಿಸ್, "ಮಕ್ಕಳು ಯಾವುದೇ ಕಾರಣಕ್ಕೂ ದೃತಿಗೆಡಬಾರದು. ನೀವೂ ಕೂಡ ಸಮಾಜದಲ್ಲಿ ಎಲ್ಲರಂತೆ ಸಮಾನರು. ನಿಮ್ಮ ಬೆನ್ನಲುಬಾಗಿ ನಾವಿದ್ದೇವೆ ಮತ್ತು ಸರ್ಕಾರವಿದೆ. ನಿಮ್ಮಲ್ಲಿ ದೃಢಸಂಕಲ್ಪವಿರಲಿ, ಚೆನ್ನಾಗಿ ಓದಿ ಭವಿಷ್ಯದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿ" ಎಂದು ಮಕ್ಕಳಿಗೆ ಆತ್ಮಸ್ಥೈರ್ಯ ತುಂಬುವ ಮಾತುಗಳನ್ನಾಡಿದರು.
ಬಿಡಿಎ ಆಯುಕ್ತರಾದ ಮೇಜರ್ ಪಿ. ಮಣಿವಣ್ಣನ್ ಮಾತನಾಡಿ, "ಈ ಮಕ್ಕಳಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವುದು ಹಾಗೂ ಅವರಲ್ಲಿ ದೊಡ್ಡ ಕನಸುಗಳನ್ನು ಚಿಗುರಿಸುವುದೇ ಈ ಕಚೇರಿ ಭೇಟಿಯ ಮುಖ್ಯ ಉದ್ದೇಶವಾಗಿದೆ. ಇದು ಕೇವಲ ಒಂದು ದಿನದ ಭೇಟಿಗೆ ಮಾತ್ರ ಸೀಮಿತವಾಗುವುದಿಲ್ಲ. ಮುಂದಿನ ದಿನಗಳಲ್ಲಿ ಈ ಮಕ್ಕಳ ಶಿಕ್ಷಣಕ್ಕೆ ಹಾಗೂ ಉಜ್ವಲ ಭವಿಷ್ಯ ರೂಪಿಸಲು ಬಿಡಿಎ ಸಂಪೂರ್ಣ ಬೆಂಬಲ ನೀಡಲಿದೆ" ಎಂದು ಭರವಸೆ ನೀಡಿದರು.