ಚಿಕ್ಕಮಗಳೂರು: ಮಳೆಯ ಕೊರತೆ, ಬರದ ನಡುವೆಯೂ ಎಲ್ಲ ಗ್ರಾಮಗಳಿಗೂ ಶುದ್ಧ ಕುಡಿಯುವ ನೀರು ಪೂರೈಸುವುದಕ್ಕೆ ರಾಜ್ಯ ಸರ್ಕಾರ ಪ್ರಥಮ ಆದ್ಯತೆ ನೀಡಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 859 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಖಾಸಗಿ ಕೊಳವೆ ಬಾವಿಗಳು ಮತ್ತು ಟ್ಯಾಂಕರ್ ಗಳನ್ನು ಬಾಡಿಗೆಗೆ ಪಡೆದು ಟ್ಯಾಂಕರ್ ಮೂಲಕ ನೀರು ಪೂರೈಸಲು ಕ್ರಮ ವಹಿಸಲಾಗಿದೆ ಎಂದರು.
ಈ ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದಾಗ ಗ್ರಾಮೀಣ ಕುಡಿಯುವ ನೀರಿಗೆ 117 ಕೋಟಿ ರೂ. ಬಿಡುಗಡೆ ಮಾಡಿದ್ದರು. ಈಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗ್ರಾಮೀಣ ವಿಧಾನಸಭಾ ಕ್ಷೇತ್ರಗಳಿಗೆ 189 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದು ನೀರು ಪೂರೈಕೆಗೆ ಹಣದ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂಬುದು ಇಲಾಖೆಯ ಗಮನಕ್ಕೆ ಬಂದರೆ, 24 ಗಂಟೆಗಳ ಒಳಗಾಗಿ ಅದಕ್ಕೆ ಪರಿಹಾರ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದೂ ಈಶ್ವರ ಖಂಡ್ರೆ ತಿಳಿಸಿದರು.
ಜಲ ಜೀವನ ಮಿಷನ್ ಅಡಿಯಲ್ಲಿ ಕೈಗೊಂಡಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗಳಿಗೆ ಅರಣ್ಯ ತೀರುವಳಿ ಸಮಸ್ಯೆ ಇರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಆದಷ್ಟು ಶೀಘ್ರ ನಿಯಮಾನುಸಾರ ಈ ಸಮಸ್ಯೆ ಪರಿಹರಿಸಲು ಕ್ರಮ ವಹಿಸಲಾಗುವುದು ಎಂದರು.
ಜಲ ಜೀವನ ಮಿಷನ್ ಅಡಿಯಲ್ಲಿ ಹಲವಾರು ಕಾಮಗಾರಿ ಅಪೂರ್ಣವಾಗಿರುವ ಹಾಗೂ ಕಳಪೆ ಕಾಮಗಾರಿ ಆಗಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಬಗ್ಗೆ 3ನೇ ವ್ಯಕ್ತಿಯಿಂದ ತಪಾಸಣೆ ಮಾಡಿಸಿ, ಅಸಮರ್ಪಕತೆ ಕಂಡು ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಈಶ್ವರ ಖಂಡ್ರೆ ತಿಳಿಸಿದರು.
ರಾಜ್ಯದ ಗ್ರಾಮೀಣ ಪ್ರದೇದಲ್ಲಿ 2 ಲಕ್ಷ ಕಿಲೋ ಮೀಟರ್ ರಸ್ತೆ ಇದೆ. ಈ ಪೈಕಿ 50 ರಷ್ಟು ಮಣ್ಣಿನ ರಸ್ತೆ ಆಗಿದೆ. ಎಲ್ಲಿ ಸಂಚಾರದ ಒತ್ತಡ ಇದೆಯೋ ಅಂತಹ ಗ್ರಾಮಕ್ಕೆ ಕನಿಷ್ಠ ಒಂದು ಸಂಪರ್ಕ ರಸ್ತೆ ಇರಬೇಕು. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಸರ್ಕಾರ ಯೋಜನೆ ರೂಪಿಸಿದೆ ಎಂದರು.
ಆದರ್ಶ ಗ್ರಾಮ ನಿರ್ಮಾಣ ಮಾಡಲು ಸರ್ಕಾರ ಆದ್ಯತೆ ನೀಡುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಘನ ತ್ಯಾಜ್ಯ, ಹಸಿ ತ್ಯಾಜ್ಯಗಳ ವೈಜ್ಞಾನಿಕ ವಿಲೇವಾರಿಗೆ ಒತ್ತು ನೀಡಲಾಗುತ್ತಿದ್ದು, ಅಭಿವೃದ್ಧಿಶೀಲ ಗ್ರಾಮೀಣ ಕರ್ನಾಟಕ ನಿರ್ಮಾಣಕ್ಕೆ ಶ್ರಮಿಸಲಾಗುವುದು ಎಂದರು.
ವಿಬಿಜಿ ರಾಮ್ ಜಿಯಿಂದ ರಾಜ್ಯಕ್ಕೆ ಹೊರೆ:
ಈ ಹಿಂದೆ ಯುಪಿಎ ಸರ್ಕಾರದ ಅವಧಿಯಲ್ಲಿ ಜಾರಿಗೆ ಬಂದ ಮನ್ರೇಗಾ ಅಡಿಯಲ್ಲಿ ರಾಜ್ಯಸರ್ಕಾರ ಕೇವಲ ಶೇ.10ರಷ್ಟು ವೆಚ್ಚ ಭರಿಸುತ್ತಿತ್ತು. ಕೇಂದ್ರ ಸರ್ಕಾರ ಶೇ.90ರಷ್ಟು ಭರಿಸುತ್ತಿತ್ತು. ಆದರೆ, ಈಗ 60:40 ಅನುಪಾತ ಮಾಡಲಾಗಿದ್ದು, ರಾಜ್ಯಗಳಿಗೆ ಹೆಚ್ಚಿನ ಹೊರೆ ಆಗುತ್ತಿದೆ. ಆದಾಗ್ಯೂ ಯಶಸ್ವಿಯಾಗಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಈವರೆಗೆ 1 ಕೋಟಿ 89 ಲಕ್ಷ ಮಾನವ ದಿನ ಸೃಜನೆಯಾಗಿದ್ದು, ದೇಶದಲ್ಲೇ ಕರ್ನಾಟಕ 6 ನೇ ಸ್ಥಾನದಲ್ಲಿದೆ. ನಿತ್ಯ 2.5 ಲಕ್ಷ ಗ್ರಾಮೀಣ ಜನರು ವಿಬಿಜಿ ರಾಮ್ ಜಿಯಡಿ ಕೆಲಸ ಮಾಡುತ್ತಿದ್ದಾರೆ. 382 ರೂ. ಕೂಲಿ ನೀಡಲಾಗುತ್ತಿದೆ ಎಂದರು.
ಬರದ ಹಿನ್ನೆಲೆಯಲ್ಲಿ ವೈಯಕ್ತಿಕ ಫಲಾನುಭವಿಗಳಿಗೆ ಕೊಳವೆಬಾವಿ ಮರುಪೂರಣ, ಬಾವಿ ತೋಡಿಸಲು, ಕೃಷಿ ಹೊಂಡ ನಿರ್ಮಿಸಲು, ಚೆಕ್ ಡ್ಯಾಂ ನಿರ್ಮಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ಇದರ ಜೊತೆಗೆ ಶಾಲೆಯ ಆವರಣಗೋಡೆ, ಆಸ್ಪತ್ರೆ ಕಟ್ಟಡ ಇತ್ಯಾದಿ ಮಾಡಲೂ ಅವಕಾಶವಿದೆ. ಹೊಸ ಜಾಬ್ ಕಾರ್ಡ್ ಗಳನ್ನು ನೀಡಲಾಗಿದ್ದು, ಗ್ರಾಮೀಣ ಜನರು ಇದರ ಲಾಭ ಪಡೆದು, ಗ್ರಾಮಗಳಲ್ಲಿ ಶಾಶ್ವತ ಆಸ್ತಿ ಸೃಜನೆಗೆ ಸಹಕರಿಸಬೇಕು ಎಂದು ಹೇಳಿದರು.
ಶಾಸಕರುಗಳಾದ ರಾಜೇಗೌಡ, ಗಾಯತ್ರಿ ಶಾಂತೇಗೌಡ, ಇಲಾಖೆಯ ಆಯುಕ್ತ ವೈ.ಎಸ್. ಪಾಟೀಲ್ ಮತ್ತಿತರರು ಹಾಜರಿದ್ದರು,