ಶಿವಮೊಗ್ಗ: ನಮ್ಮ ಮನೆಯ ಪಕ್ಕದಲ್ಲಿರುವ ಬಾವಿಗೂ ನನಗೂ ಯಾವುದೇ ಸಂಬಂಧವಿಲ್ಲ. ನನ್ನ ರಾಜಕೀಯ ಬೆಳವಣಿಗೆಯನ್ನು ಸಹಿಸದೆ, ತೇಜೋವಧೆ ಮಾಡಿ ಲಾಭ ಗಳಿಸಲು ಮಾಜಿ ಸಚಿವರು ಬಾವಿ ವಿಚಾರವನ್ನು ಮುಂದಿಟ್ಟುಕೊಂಡು ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಸಾಗರ ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಆಕ್ರೋಶ ಹೊರಹಾಕಿದ್ದಾರೆ.
ಇಂದು ತಮ್ಮ ನಿವಾಸದ ಬಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಸಾರ್ವಜನಿಕವಾಗಿ ಮಾನಹಾನಿ ಉಂಟುಮಾಡುತ್ತಿರುವ ಮಾಜಿ ಸಚಿವ ಹರತಾಳು ಹಾಲಪ್ಪ, ಸೇವಾಸಾಗರ ವಿದ್ಯಾಸಂಸ್ಥೆಯ ನಿವೃತ್ತ ಮುಖ್ಯ ಶಿಕ್ಷಕ ನಾರಾಯಣಮೂರ್ತಿ ಹಾಗೂ ಸ್ಥಳೀಯ ಬಿಜೆಪಿ ಬೂತ್ ಅಧ್ಯಕ್ಷ ಸೇರಿದಂತೆ ಒಟ್ಟು ನಾಲ್ಕು ಜನರ ವಿರುದ್ಧ ಶೀಘ್ರದಲ್ಲೇ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.
ಸ್ಥಳದಲ್ಲೇ ಮಾಧ್ಯಮಗಳಿಗೆ ಸತ್ಯದರ್ಶನ ಮಾಡಿಸಿದ ಶಾಸಕರು
ಬುಧವಾರ ಗಾಂಧಿನಗರದಲ್ಲಿರುವ ತಮ್ಮ ನಿವಾಸದ ಬಳಿ ಜಾಗದ ಮಾಲೀಕರೊಂದಿಗೆ ಮಾಧ್ಯಮದವರ ಮುಂದೆ ಹಾಜರಾದ ಶಾಸಕರು, ಸ್ಥಳ ಪರಿಶೀಲನೆ ನಡೆಸಿ ವಾಸ್ತವಾಂಶ ಬಿಚ್ಚಿಟ್ಟರು. ವಿವಾದ ಸೃಷ್ಟಿಸಲಾಗಿರುವ ಬಾವಿಯ ಪಕ್ಕದಲ್ಲೇ ಸಾರ್ವಜನಿಕ ಬಳಕೆಗಾಗಿ ತೆಗೆಸಿರುವ ಮತ್ತೊಂದು ಸರ್ಕಾರಿ ಬಾವಿಯನ್ನು ತೋರಿಸಿದ ಅವರು, "ಇದು ಹಾಳುಬಿದ್ದಿದ್ದ ಖಾಸಗಿ ಬಾವಿಯಾಗಿದ್ದು, ಸ್ವಾಮಿ ವಿವೇಕಾನಂದ ಪುಸ್ತಕ ಭಂಡಾರ ಸಂಸ್ಥೆಯ ಜಾಗದಲ್ಲಿದೆ. ಇದು ಯಾವುದೇ ಕಾರಣಕ್ಕೂ ಸರ್ಕಾರಿ ಬಾವಿಯಲ್ಲ ಎಂಬುದಕ್ಕೆ ಸ್ಪಷ್ಟ ದಾಖಲೆಗಳಿವೆ. ಸಂಸ್ಥೆಯವರೇ ಸ್ವಂತ ಖರ್ಚಿನಲ್ಲಿ ₹14,000 ವೆಚ್ಚ ಮಾಡಿ ಬಾವಿಯನ್ನು ಮುಚ್ಚಿಸಿದ್ದಾರೆ. ಆದರೆ ನಗರಸಭೆ ಚುನಾವಣೆ ಸಮೀಪಿಸುತ್ತಿರುವ ಕಾರಣ ಬಿಜೆಪಿಯ ಕೆಲವರು ಮತ್ತು ಮಾಜಿ ಸಚಿವರು ಇದನ್ನು ದೊಡ್ಡ ರಾದ್ಧಾಂತವನ್ನಾಗಿ ಮಾಡುತ್ತಿದ್ದಾರೆ" ಎಂದು ನೇರವಾಗಿ ಆರೋಪಿಸಿದರು.
ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ
ಸುಖಾ ಸುಮ್ಮನೇ ಬಾವಿ ವಿವಾದವನ್ನು ಹರಡಲಾಗುತ್ತಿದೆ. ಮುಚ್ಚಿದ ಬಾವಿಗೂ ನನಗೂ ಯಾವುದೇ ಸಂಬಂಧವಿಲ್ಲ. ಹೀಗಿದ್ದರೂ ಕೆಲವರು ತಮ್ಮ ತೇಜೋವಧೆ ಮಾಡುತ್ತಿದ್ದಾರೆ. ಅಂತಹವರ ವಿರುದ್ಧ ಕಾನೂನು ಹೋರಾಟ ನಡೆಸಲಿದ್ದೇನೆ. ಈಗಾಗಲೇ ನಮ್ಮ ವಕೀಲರ ಬಳಿಯಲ್ಲೂ ಈ ಬಗ್ಗೆ ಚರ್ಚಿಸಲಾಗಿದೆ. ನಾಲ್ಕೈದು ಜನರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿದರು.
ಮೂಢನಂಬಿಕೆ ಹರಡುತ್ತಿರುವ ಆರೋಪ ಹಾಗೂ ಹಾಲಪ್ಪ ವಿರುದ್ಧ ವಾಗ್ದಾಳಿ
"ಬಾವಿ ಮುಚ್ಚಿದರೆ ನಾನು ಮಂತ್ರಿಯಾಗುತ್ತೇನೆ ಎಂಬ ಮೂಢನಂಬಿಕೆಯ ಸುಳ್ಳು ಕಥೆಯನ್ನು ಮಾಜಿ ಸಚಿವರು ಜನರ ಮಧ್ಯೆ ಹಬ್ಬಿಸುತ್ತಿದ್ದಾರೆ. ನಾನು ಸಚಿವನಾಗಲು ಇಂತಹ ಕೆಲಸ ಮಾಡಬೇಕಾಗಿಲ್ಲ. ಇತಿಹಾಸ ಪ್ರಸಿದ್ಧ ಗಣಪತಿ ಕೆರೆಯ ಪಕ್ಕದಲ್ಲೇ ಚಾನೆಲ್ ನಿರ್ಮಿಸಿ ತಮ್ಮ ಮನೆಗೆ ಅನುಕೂಲ ಮಾಡಿಕೊಂಡಿರುವಂತಹ ಹತ್ತಾರು ಕೃತ್ಯಗಳು ಹಾಲಪ್ಪ ಅವರ ಮೇಲಿವೆ. ತಮ್ಮ ಸುತ್ತಮುತ್ತ ಓಸಿ ಬಿಡ್ಡರ್‌ಗಳು, ರೌಡಿಶೀಟರ್‌ಗಳನ್ನು ಇಟ್ಟುಕೊಂಡು ಓಡಾಡುವ ಹಾಲಪ್ಪ, ಈ ಹಿಂದೆ ವಿದ್ಯಾಸಂಸ್ಥೆಯ ಸಭೆಗೆ ನುಗ್ಗಿ ಮಹಿಳೆಯರ ಮೇಲೂ ಹಲ್ಲೆ ಮಾಡಿಸಿದ್ದರು. ಅಂತಹ ಕೀಳು ಸಂಸ್ಕೃತಿ ನನಗಿಲ್ಲ. ರಾಜಕೀಯ ಲಾಭಕ್ಕಾಗಿ ಇಂತಹ ಕೆಟ್ಟ ಕೃತ್ಯಕ್ಕೆ ಕೈಹಾಕಿರುವುದು ತೀರಾ ಖಂಡನೀಯ" ಎಂದು ಬೇಳೂರು ಗುಡುಗಿದರು.
ಸಂಸ್ಥೆಯಿಂದಲೂ ಮಾನನಷ್ಟ ಮೊಕದ್ದಮೆಯ ಎಚ್ಚರಿಕೆ
ಇದೇ ವೇಳೆ ಮಾತನಾಡಿದ ಸ್ವಾಮಿ ವಿವೇಕಾನಂದ ಪುಸ್ತಕ ಭಂಡಾರದ ಅಧ್ಯಕ್ಷ ಕವಲಕೋಡು ವೆಂಕಟೇಶ್, "ನಮ್ಮ ಸಂಸ್ಥೆಗೆ ಸೇರಿದ ಜಾಗದಲ್ಲಿದ್ದ ಹಳೆಯ ಬಾವಿಯನ್ನು ನಾವೇ ಮುಚ್ಚಿಸಿದ್ದೇವೆ. ಇದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ನಮ್ಮ ಸಂಸ್ಥೆಯ ಬಾವಿ ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಂಡು ಇಲ್ಲಸಲ್ಲದ ತೊಂದರೆ ನೀಡಿದರೆ, ಅಂತಹವರ ವಿರುದ್ಧ ಸಂಸ್ಥೆಯ ವತಿಯಿಂದಲೂ ಕಾನೂನು ಕ್ರಮ ಕೈಗೊಂಡು ಮಾನನಷ್ಟ ಮೊಕದ್ದಮೆ ಹೂಡುತ್ತೇವೆ" ಎಂದು ಖಡಕ್ ಎಚ್ಚರಿಕೆ ರವಾನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಮುಖಂಡರಾದ ಕೋಳಿವಾಡ, ವೆಂಕಟೇಶ್, ಪ್ರಮುಖರಾದ ಸೈಯದ್ ಜಾಕೀರ್, ಅನ್ವರ್ ಭಾಷಾ, ಗಿರೀಶ್ ಕೋವಿ, ಅನಿತಾ ಕುಮಾರಿ, ಬಿ.ಆರ್. ಜಯಂತ್, ಭೀಮನೇರಿ ಆನಂದ್, ಬಿ.ಎ. ಇಂದುಧರ ಬೇಸೂರು, ಸೂರ್ಯನಾರಾಯಣ ಕೆ.ಎಂ. ಹಾಗೂ ಪೌರಾಯುಕ್ತ ಎಚ್.ಕೆ. ನಾಗಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.