ಶಿವಮೊಗ್ಗ: ಇಂದಿನ ಕಾಲದಲ್ಲಿ ರಸ್ತೆಯಲ್ಲಿ ನೂರು ರೂಪಾಯಿ ಬಿದ್ದಿದ್ದರೂ ಕಣ್ಣು ತಪ್ಪಿಸಿ ಜೇಬಿಗಿಳಿಸಿಕೊಳ್ಳುವವರೇ ಹೆಚ್ಚು. ಆದರೆ, ಇಲ್ಲೊಬ್ಬ ವಿದ್ಯುತ್ ಇಲಾಖೆಯ ನೌಕರ ತನಗೆ ಸಿಕ್ಕ ಬೆಲೆಬಾಳುವ ಚಿನ್ನದ ಉಂಗುರ, ಮೊಬೈಲ್ ಹಾಗೂ ಸಾವಿರಾರು ರೂಪಾಯಿ ನಗದು ಇದ್ದ ಪರ್ಸನ್ನು ವಾರಸುದಾರರಿಗೆ ಮರಳಿಸುವ ಮೂಲಕ ಮಾನವೀಯತೆ ಮತ್ತು ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ.
ಜೋಗದ ವಿದ್ಯುತ್ ಲೈನ್‌ಮ್ಯಾನ್ ಕುಮಾರ್ ಭಾನುವಾರ ಕರ್ತವ್ಯದ ನಿಮಿತ್ತ ಕಾರ್ಗಲ್ ಸಮೀಪದ ವಡನ್‌ಬೈಲಿಗೆ ತೆರಳುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ ರಸ್ತೆಯಲ್ಲಿ ಬಿದ್ದಿದ್ದ ಪರ್ಸ್ ಒಂದು ಅವರ ಕಣ್ಣಿಗೆ ಬಿದ್ದಿದೆ. ಕುತೂಹಲದಿಂದ ಅದನ್ನು ತೆರೆದು ನೋಡಿದಾಗ ಒಳಗಡೆ ಸಾವಿರಾರು ರೂಪಾಯಿ ನಗದು, ಚಿನ್ನದ ಉಂಗುರ ಹಾಗೂ ಮೊಬೈಲ್ ಫೋನ್ ಇರುವುದು ಕಂಡುಬಂದಿದೆ. ಆ ಕ್ಷಣಕ್ಕೆ ಯಾವುದೇ ಆಸೆಗೆ ಒಳಗಾಗದ ಕುಮಾರ್, ಪರ್ಸ್ ಕಳೆದುಕೊಂಡವರು ಎಷ್ಟು ಕಂಗಾಲಾಗಿರಬಹುದು ಎಂದು ಯೋಚಿಸಿ ತಕ್ಷಣವೇ ಅದನ್ನು ನಿಜವಾದ ಮಾಲೀಕರಿಗೆ ತಲುಪಿಸಲು ನಿರ್ಧರಿಸಿದರು.
ಇತ್ತ ಶಿರಸಿಯ ಶಿಕ್ಷಕಿ ಶಶಿಕಲಾ ಎಂಬುವವರು ತಮ್ಮ ಪತಿಯೊಂದಿಗೆ ವಡನ್‌ಬೈಲಿಗೆ ಪ್ರಯಾಣಿಸುತ್ತಿದ್ದಾಗ ಅಚಾತುರ್ಯದಿಂದ ಪರ್ಸ್ ಕಳೆದುಕೊಂಡು ದಿಕ್ಕುತೋಚದಂತಾಗಿದ್ದರು. ಬೆಲೆಬಾಳುವ ವಸ್ತುಗಳು ಮತ್ತು ದಾಖಲೆಗಳು ಕಳೆದುಹೋದ ಆತಂಕದಲ್ಲಿ ಅವರು ನೇರವಾಗಿ ಕಾರ್ಗಲ್ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು.
ಠಾಣಾಧಿಕಾರಿ ಸೋಮಪ್ಪ ಅವರು ಈ ಬಗ್ಗೆ ಶೋಧ ಕಾರ್ಯ ಆರಂಭಿಸುತ್ತಿದ್ದ ಹೊತ್ತಿನಲ್ಲೇ, ಲೈನ್‌ಮ್ಯಾನ್ ಕುಮಾರ್ ಪೊಲೀಸ್ ಠಾಣೆಗೆ ಕರೆ ಮಾಡಿ ತಮಗೆ ಪರ್ಸ್ ಸಿಕ್ಕಿರುವ ವಿಷಯವನ್ನು ಪ್ರಾಮಾಣಿಕವಾಗಿ ತಿಳಿಸಿದ್ದಾರೆ.
ಠಾಣೆಗೆ ಆಗಮಿಸಿದ ಕುಮಾರ್, ಪೊಲೀಸರ ಸಮ್ಮುಖದಲ್ಲೇ ಪರ್ಸನ್ನು ಶಿಕ್ಷಕಿ ಶಶಿಕಲಾ ಅವರ ಕೈಗಿತ್ತರು. ಕಳೆದುಹೋದ ತಮ್ಮ ಸಂಪತ್ತು ಸುರಕ್ಷಿತವಾಗಿ ಮರಳಿ ಸಿಕ್ಕ ಖುಷಿಯಲ್ಲಿ ಶಶಿಕಲಾ ದಂಪತಿ ಲೈನ್‌ಮ್ಯಾನ್ ಕುಮಾರ್ ಅವರ ಕಾಳಜಿ ಹಾಗೂ ಪ್ರಾಮಾಣಿಕತೆಯನ್ನು ಕಣ್ಣೀರ ಧ್ವನಿಯಲ್ಲಿ ಕೊಂಡಾಡಿ ಧನ್ಯವಾದ ಅರ್ಪಿಸಿದರು.
ಕರ್ತವ್ಯನಿಷ್ಠೆಯ ಜೊತೆಗೆ ಸಮಾಜಕ್ಕೆ ಮಾದರಿಯಾದ ಲೈನ್‌ಮ್ಯಾನ್ ಕುಮಾರ್ ಅವರ ಕಾರ್ಯವೈಖರಿಯನ್ನು ಕಾರ್ಗಲ್ ಠಾಣಾಧಿಕಾರಿ ಹಾಗೂ ಸಾರ್ವಜನಿಕರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.